ಬೆಂಗಳೂರು,ಸೆ.27-ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಕವಿದಿದ್ದ ಎಲ್ಲಾ ಮೋಡಗಳು ದೂರ ಸರಿದಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಈಗ ಬಹಳ ಚೆನ್ನಾಗಿ ನಡೆಯುತ್ತಿದೆ. ಕವಿದಿದ್ದ ಮೋಡ ದೂರ ಸರಿದ ಮೇಲೆ ಎಲ್ಲವೂ ಬೆಳ್ಳಗಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ನ ರಾಜ್ಯಾಧ್ಯಕ್ಷರಿಬ್ಬರು ಇದ್ದಾಗ ಮಾತ್ರ ಪರಿಪೂರ್ಣ ಸಮನ್ವಯ ಸಮಿತಿಯಾಗಲಿದೆ. ಹೀಗಾಗಿ ತಮ್ಮನ್ನೂ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಮಿತಿಗೆ ಈಗಾಗಲೇ ಸೇರಿಸಬೇಕೆಂದು ಬಹಿರಂಗವಾಗಿಯೇ ಹೇಳಿದ್ದೇನೆ ಎಂದರು.
ಇಂದು ಅಭ್ಯರ್ಥಿ ಆಯ್ಕೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಅಭ್ಯರ್ಥಿಯನ್ನು ಇಂದು ಆಯ್ಕೆ ಮಾಡಲಾಗುವುದು. ಸಂಜೆಯೊಳಗೆ ಜೆಡಿಎಸ್ನ ಎಲ್ಲ ಬಿಬಿಎಂಪಿ ಸದಸ್ಯರ ಸಭೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಪಕ್ಷದ ವರಿಷ್ಠರಾದ ದೇವೇಗೌಡರೊಂದಿಗೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ.
ಉಪಮೇಯರ್ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯೊಬ್ಬರನ್ನು ಆಯ್ಕೆ ಮಾಡುವ ಚಿಂತನೆ ಇದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಅಂತಿಮ ಹಂತಕ್ಕೆ ಬಂದಿದ್ದು, ನಿನ್ನೆ ಈ ಬಗ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದರು.
ವಿಧಾನಸಭೆಯಿಂದ ವಿಧಾನಪರಿಷತ್ನ ಉಪಚುನಾವಣೆಗೆ ಎಲ್ಲರನ್ನು ಸಂಪರ್ಕಿಸಿಯೇ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಬೆಂಗಳೂರು ನಗರ ಯುವ ಜೆಡಿಎಸ್ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರನ್ನು ಆಯ್ಕೆ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡುವಾಗ ಆರೋಪಗಳು ಕೇಳಿ ಬರುವುದು ಸಹಜ. ಪಂಚಾಯ್ತಿಯಿಂದ ಪಾರ್ಲಿಮೆಂಟ್ನವರೆಗೂ ಕ್ರಿಮಿನಲ್ ಆರೋಪ ಹೊತ್ತುವರೂ ಇದ್ದಾರೆ.
ಹಾಗಂತ ಕ್ರಿಮಿನಲ್ ಆರೋಪವುಳ್ಳವರು ಇರಬೇಕೆಂದು ತಾವು ಬಯಸುವುದಿಲ್ಲ ಎಂದು ವಿಧಾನಪರಿಷತ್ನ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವನಾಥ್ ಈ ರೀತಿ ಪ್ರತಿಕ್ರಿಯಿಸಿದರು.