ಅಥೇನ್ಸ್‍ನ ರಾಜಾಡಳಿತ ಕೃತಿ ಲೋಕಾರ್ಪಣೆಗೆ ಸಿದ್ಧತೆ

ಬೆಂಗಳೂರು,ಸೆ.27-ಜಗತ್ತಿನ ಪ್ರಾಚೀನ ಸಂಸದೀಯ ಇತಿಹಾಸದ ಕಥನವನ್ನೊಳಗೊಂಡ ಅಥೇನ್ಸ್‍ನ ರಾಜಾಡಳಿತ ಎಂಬ ತಮ್ಮ 7ನೇ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಭಾರತೀಯ ವಿದ್ಯಾಭವನದಲ್ಲಿ ಸೆ.29ರಂದು ಈ ಕೃತಿಯನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಡುಗಡೆ ಮಾಡಲಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ಡಿ.ಎಂ.ಹನೀಫ್ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ ಎಂದರು.

2016ರಲ್ಲಿ ಗ್ರೀಕ್‍ನ ಪುರಾತನ ಜನತಂತ್ರ ವ್ಯವಸ್ಥೆ ಹಾಗೂ ಚುನಾವಣೆ ಬಗ್ಗೆ ಪುಸ್ತಕ ಬರೆದುಕೊಡಲು ಆಹ್ವಾನ ಬಂದಿತ್ತು. ಆಹ್ವಾನದ ಮೇರೆಗೆ ಗ್ರೀಸ್ ದೇಶಕ್ಕೆ ತೆರಳಿ ಅಧ್ಯಯನ ಮಾಡಿದ್ದು, ಅಥೈನ್ಸ್‍ನ ರಾಜಾಡಳಿತ ಕುರಿತು ಪುಸ್ತಕ ಬರೆಯಲಾಗಿದೆ ಎಂದರು.
ಎರಡು ಸಾವಿರ ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಚುನಾವಣೆ ಪ್ರಾರಂಭವಾಗಿತ್ತು. ಗ್ರೀಕ್‍ನ ಪುರಾತನ ಜನತಂತ್ರ ವ್ಯವಸ್ಥೆ ಹೇಗಿತ್ತು ಎಮಬುದನ್ನು ಜನರಿಗೆ ಪರಿಚಯಿಸಲು ಬರೆಯಲಾಗಿದೆ. ಇಲ್ಲಿ ಬಿಡುಗಡೆಯಾದ ನಂತರ ಮತ್ತೆ ಗ್ರೀಕ್ ಸಂಸತ್‍ಗೆ ಈ ಪುಸ್ತಕವನ್ನು ಸಲ್ಲಿಸಲಾಗುವುದು ಎಂದರು.
ಗ್ರೀಕ್‍ನಲ್ಲಿ ಸಾಕಷ್ಟು ಮೇಧಾವಿಗಳಿದ್ದರು. ಒಲಿಂಪಿಕ್ ಕ್ರೀಡಾಕೂಟ ಹುಟ್ಟುಹಾಕಿದವರು. ರಂಗ ಮತ್ತು ದುರಂತ ನಾಟಕಗಳು ಹುಟ್ಟಿದ್ದು ಗ್ರೀಕ್‍ನಲ್ಲೇ. ಹೀಗಾಗಿ ಗ್ರೀಕ್ ಅಥೈನ್ಸ್‍ನ ರಾಜಾಡಳಿತ ಕುರಿತು ಬರೆದಿರುವಂತಹ ಈ ಕೃತಿಯನ್ನು ಸಾರಸತ್ವ ಲೋಕ ಸ್ವಾಗತಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ