ಹುಸಿ ಕನ್ನಡಪರ ಹೋರಾಟಗಾರರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ – ಮುಖ್ಯಮಂತ್ರಿ

ಬೆಂಗಳೂರು, ಸೆ.26- ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸಲು ಸಮ್ಮಿಶ್ರ ಸರ್ಕಾರ ಸಿದ್ದವಿದೆ. ಈ ವಿಚಾರದಲ್ಲಿ ಹುಸಿ ಕನ್ನಡಪರ ಹೋರಾಟಗಾರರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದರು.

ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯ 156 ಶಾಲಾ-ಕಾಲೇಜುಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತಂತೆ ಇಂದಿನಿಂದ ಆರಂಭಿಸಿರುವ ಬಿಬಿಎಂಪಿ ರೋಷಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆವ ಕನ್ನಡಪರ ಹೋರಾಟಗಾರರು ತಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನೀವು ಯಾವ ಶಾಲೆಯಲ್ಲಿ ಓದಿಸುತ್ತಿದ್ದೀರಿ ಎಂಬ ಬಗ್ಗೆ ಜಾಹೀರಾತು ಕೊಟ್ಟಿಬಿಡಿ. ಇಂಗ್ಲಿಷ್ ಖಾಸಗಿ ಶಾಲೆಗಳ ಸ್ವತ್ತಾ ? ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್ ಬೇಡವಾ? ಇನ್ನು ಮುಂದೆ ಸರ್ಕಾರಿ ಹಾಗೂ ಪಾಲಿಕೆ ಶಾಲೆಗಳಲ್ಲೂ ಇಂಗ್ಲಿಷ್‍ಅನ್ನು ಒಂದು ಭಾಷೆಯಾಗಿ ಕಲಿಸಲು ನಮ್ಮ ಸಮ್ಮಿಶ್ರ ಸರ್ಕಾರ ಸಿದ್ದ ಎಂದು ಪ್ರಕಟಿಸಿದರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಎಂಬುದು ನನ್ನ ಹಾಗೂ ಡಿಸಿಎಂ ಪರಮೇಶ್ವರ್ ಅವರ ಕನಸಾಗಿತ್ತು. ಆ ಕನಸು ಇಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಸಹಾಯದಿಂದ ನನಸಾಗುತ್ತಿದೆ ಎಂದು ಹೇಳಿದರು.
ಪ್ರತಿ ಬಡ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕೆಂಬುದೆ ನಮ್ಮ ಸರ್ಕಾರದ ಉದ್ದೇಶವಾಗಿದೆ. ಮೈಕ್ರೋ ಸಾಫ್ಟ್ ಸಂಸ್ಥೆಯವರು ಬಿಬಿಎಂಪಿ ಶಾಲೆಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದೆ ಬಂದಿರುವ ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಣ್ಣಿಸಿದರು.

ಇದುವರೆಗೆ ಪಾಲಿಕೆ ಶಾಲೆಗಳೆಂದರೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ನಂಬಲಾಗಿತ್ತು. ಇನ್ನು ಮುಂದೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದೆ ನೀವು ಕೂಡ ತಂದೆ-ತಾಯಿಗಳ ನಿರೀಕ್ಷೆಗೆತಕ್ಕಂತೆ ಬೆಳೆಯಬಹುದು ಇದಕ್ಕೆ ನಮ್ಮ ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ವಿದ್ಯಾರ್ಥಿಗಳಿಗೆ ಸಿಎಂ ತಿಳಿಸಿದರು.
ಗಂಡು ಮಕ್ಕಳೆ ಇಲ್ಲ:
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಗಂಡು ಮಕ್ಕಳು ಅಷ್ಟಾಗಿಲ್ಲ. ಹಾಗಾಗಿ ಪೆÇೀಷಕರಿಗೆ ಅಭಿನಂದನೆ. ಸರ್ಕಾರ ರಚನೆಯಾದಾಗಲೇ ನಾನು ಮತ್ತು ಉಪಮುಖ್ಯಮಂತ್ರಿಗಳು ಖುದ್ದು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದಿದ್ದೆವು. ನಾನು ಈ ಶಾಲಾ-ಕಾಲೇಜುಗಳ ದಾಖಲಾತಿ ಪರಿಶೀಲಿಸಿದಾಗ ಹೆಣ್ಣು ಮಕ್ಕಳು ಹೆಚ್ಚಾಗಿರುವುದು ಕಂಡು ಬಂದಿದೆ. ಇಲ್ಲಿ ಗಂಡುಮಕ್ಕಳೆ ಇಲ್ಲವಾ ಎಂದು ನಗೆ ಚಟಾಕಿ ಹಾರಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

ಬಿಬಿಎಂಪಿ ಶಾಲೆಗಳ ಜತೆಗೆ ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳ ದುರಸ್ಥಿ ಮಾಡಲು ಹಾಗೂ ಹೊಸ ಕಟ್ಟಡ ಕಟ್ಟಲು ಒಂದು ಸಾವಿರ ಕೋಟಿ ಹಣವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಮಲೆನಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗೆ ಹೋಗಲು ನದಿ ದಾಟುವಾಗ ಮಕ್ಕಳು ಪ್ರಾಣ ಕಳೆದುಕೊಂಡ ಉದಾಹರಣೆ ಇವೆ. ಹಾಗಾಗಿ ಕಾಲು ಸೇತುವೆ ನಿರ್ಮಿಸಲು 121 ಕೋಟಿ ಮೀಸಲಿರಿಸಿದ್ದು, ಶೀಘ್ರವೇ ಈ ಯೋಜನೆ ಪ್ರಾರಂಭವಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಿಬಿಎಂಪಿ ಅಧಿಕಾರಿಗಳಿಗೆ ಛೀಮಾರಿ:
ಕೋರ್ಟ್ ಛೀಮಾರಿ ಹಾಕಿದ ನಂತರವೇ ನೀವು ಕೆಲಸ ಮಾಡೋದಾ ? ಜವಾಬ್ದಾರಿ ಅರಿತು ಕೆಲಸ ಮಾಡೋಕಾಗಲ್ವಾ? ಮಳೆಗಾಲದ ಅನಾಹುತ ತಪ್ಪಿಸಲು, ರಸ್ತೆ ಗುಂಡಿ ಮುಚ್ಚುವ ಬಗ್ಗೆ, ಕಸದ ಸಮಸ್ಯೆ ನಿವಾರಣೆಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಏಕೆ ಕೆಲಸ ಮಾಡ್ತೀರಾ ? ಇನ್ನು ಮುಂದಾದರೂ ಪ್ರಾಮಾಣಿಕವಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ 4 ಡಿಗ್ರಿ ಕಾಲೇಜು, 14 ಪಿಯುಸಿ, 32 ಹೈಸ್ಕೂಲ್, 14 ಪ್ರಾಥಮಿಕ, 90 ಶಿಶುವಿಹಾರ ಕೇಂದ್ರಗಳಿವೆ. 17 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ಅಲ್ಪಸಂಖ್ಯಾತರು, ಬಡವರು ಹೆಚ್ಚಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆದಾಗ ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೆ ಏರಸುವಂತೆ ಕರೆ ಕೊಟ್ಟಿದ್ದರು. ಅವರ ಆದೇಶದಂತೆ ಮೈಕ್ರೋ ಸಾಫ್ಟ್ ಸಂಸ್ಥೆ ಸಹಯೋಗದಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಹೇಳಿದರು.

ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥರಾದ ರೋಷಿನಿ ಮಾತನಾಡಿ, 21ನೇ ಶತಮಾನ ಸ್ಪರ್ಧಾತ್ಮಕ ಯುಗ. ಹಾಗಾಗಿ ವಿಶ್ವದ ಎಲ್ಲಾ ಮಕ್ಕಳಿಗೆ ಉನ್ನತ ಮಟ್ಟದ ವ್ಯಾಸಂಗ ಸಿಗಬೇಕು. ಅವರನ್ನು ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕು. ಯಾವ ಮಗುವೂ ಮನೆಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆ ಈ ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಇದು ವಿಶ್ವದಲ್ಲೇ ಮೊದಲ ಯೋಜನೆ ಎಂದು ಬಣ್ಣಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಸಂಪತ್‍ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಶಾಸಕರಾದ ಟಿ.ಎ.ಶರವಣ, ಮಂಜುನಾಥ್, ಸ್ಥಳೀಯ ಜನಪ್ರತಿನಿಧಿಗಳು, ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ