ಬೆಂಗಳೂರು, ಸೆ.23- ನಿವೇಶನ ಕೊಡಿಸುವುದಾಗಿ ಸಾರ್ವಜನಿಕರಿಂದ ಕರ್ನಾಟಕ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಕೇಂದ್ರ ಸಮಿತಿಯ ಹೆಸರಿನಲ್ಲಿ ಹಣ ವಸೂಲಿ ಮಾಡಿ ವಂಚಿಸಿದ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ವಿರುದ್ಧ ಕಾನೂನು ಕ್ರಮಕೈಗೊಂಡು, ಅವರ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಹೋರಾಟ ಸಮಿತಿ ಒತ್ತಾಯಿಸಿದೆ.
ಬಾಡಿಗೆದಾರರ ಕ್ಷೇಮಾಭಿವೃದ್ಧಿ ಕೇಂದ್ರ ಸಮಿತಿಯ ಅಧ್ಯಕ್ಷ ಉಮಾಶಂಕರ್ ಹಾಗೂ ಕಾರ್ಯದರ್ಶಿ ಜಿ.ಪಿ.ಸೀತಾಲಕ್ಷ್ಮೀ ಅವರು ನಿವೇಶನ ಕೊಡುವುದಾಗಿ ಸಾರ್ವಜನಿಕರಿಂದ ಮೊದಲು ತಲಾ 20 ಸಾವಿರ ರೂ.ಯಂತೆ ವಸೂಲಿ ಮಾಡಿದ್ದಾರೆ. ಯಲಹಂಕ ಹೋಬಳಿಯ ಮೇಡಿ ಅಗ್ರಹಾರದ ಸರ್ವೆ ನಂ.24ರಲ್ಲಿ 48 ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರತಿ ಸದಸ್ಯರಿಂದ ಮತ್ತೆ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ವಸೂಲಿ ಮಾಡಿದ್ದಾರೆ. ಹೀಗೆ ಕನಿಷ್ಠ 6ರಿಂದ 7 ಕೋಟಿ ರೂ.ಹಣ ಸಂಗ್ರಹಿಸಿ ಈ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ನಿವೇಶನಕ್ಕಾಗಿ ಹಣ ಕಟ್ಟಿದವರು ಚಾತಕಪಕ್ಷಿಯಂತೆ ಸೈಟ್ಗಾಗಿ ಕಾಯುತ್ತಿದ್ದಾರೆ ಎಂದು ರಾಜ್ಯ ದಲಿತ ಹೋರಾಟ ಸಮಿತಿಯ ಅಧ್ಯಕ್ಷ ಚೆಲುವನಾರಾಯಣ ಮತ್ತು ಉಪಾಧ್ಯಕ್ಷ ಗೋವಿಂದರಾಜ್ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜೂರಾಗಿದೆ ಎನ್ನಲಾದ ಯಲಹಂಕದ ಜಮೀನಿನ ಬಗ್ಗೆ ವಿಚಾರಣೆ ನಡೆಸಿದಾಗ, ಬೆಂಗಳೂರು ಉತ್ತರ ತಹಶೀಲ್ದಾರ್ ಅವರು ಕಾನೂನಿನಲ್ಲಿ ಸಮಿತಿಗೆ ಜಮೀನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹಣ ಕಟ್ಟಿದ ಸದಸ್ಯರು, ಅಧ್ಯಕ್ಷ ಮತ್ತು ಕಾರ್ಯದರ್ಶಿಯವರನ್ನು ವಿಚಾರಿಸಿದಾಗ ಅವರು ಅವಾಚ್ಯ ಶಬ್ಧಗಳಿಂದ ಬೆದರಿಸಿ ದೌರ್ಜನವ್ಯವೆಸಗುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಪೆÇಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ಜಿ.ಉಮಾಶಂಕರ್, ಅವರ ಪತ್ನಿ ಹಾಗೂ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಜೆ.ಪಿ.ಸೀತಾಲಕ್ಷ್ಮೀ, ಅವರ ಮಗ ಚೇತನ್ ವಿರುದ್ಧ ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರ ಚರ ಮತ್ತು ಸ್ಥಿರಾಸ್ತಿಗಳನ್ನು ವಸೂಲಿ ಮಾಡಿ ಹಣ ಕಟ್ಟಿದವರಿಗೆ ಹಿಂದಿರುಗಿಸಬೇಕು ಎಂದು ಚೆಲುವನಾರಾಯಣ ಒತ್ತಾಯಿಸಿದ್ದಾರೆ.