ಬೆಂಗಳೂರು, ಸೆ.22- ಈಸ್ಟ್ ಕಲ್ಚರಲ್ ಅಸೋಸಿಯೇಷನ್ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ಮತ್ತು ಮಲಯಾಳಂ ಸಾಹಿತ್ಯದ ಮಧುರ ಸ್ನೇಹಮಯ ಕಾರ್ಯಕ್ರಮವನ್ನು ನಾಳೆ (ಸೆ.23) ಇಂದಿರಾನಗರದ ಈಸ್ಟ್ ಕಲ್ಚರಲ್ ಅಸೋಸಿಯೇಷನ್ನಲ್ಲಿ ಹಮ್ಮಿಕೊಂಡಿರುವುದಾಗಿ ಸಾಹಿತ್ಯ ವೇದಿಕೆ ಅಧ್ಯಕ್ಷ ಜಯರಾಜ್ ಮೆನನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯೋತ್ಸವ ಕವಿ, ನಾಡೋಜ ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ ಮಲಯಾಳಂ ಕೃತಿ ನಿಸಾರಿಂಡೆ 75 ಕವಿತಕಳ್ ಕೃತಿ ಲೋಕಾರ್ಪಣೆಗೊಳ್ಳಲಿದೆ. ಲೇಖಕಿ ಪಾರ್ವತಿ ಜಿ.ಐತಾಳ್ ಅವರು ಅನುವಾದ ಮಾಡಿದ್ದಾರೆ ಎಂದರು.
ಕಾರ್ಯಕ್ರಮವು ನಾಳೆ ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿದ್ದು, ಲೇಖಕ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ಬಾಲಕೃಷ್ಣನ್, ಕವಿ ಪಿ.ಕೆ.ಗೋಪಿ ಪಾಲ್ಗೊಳ್ಳಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ಡಾ.ಎಚ್.ಎಲ್.ಪುಷ್ಪ, ಡಾ.ತಮಿಳ್ಸೆಲ್ವಿ, ಡಾ.ಕೆ.ಷರೀಫಾ, ಗೊರೂರು ಪಂಕಜ, ಮಾಹೇರ್ ಮನ್ಸೂರ್ ಅವರುಗಳು ನಿವಾಸ್ ಅವರ ಕನ್ನಡ, ಉರ್ದು, ಮಲಯಾಳಂ ಕವಿತೆಗಳನ್ನು ವಾಚನ ಮಾಡಲಿದ್ದಾರೆ.
ಗಾಯಕರಾದ ಡಾ.ಶಮಿತಾ ಮಲ್ನಾಕ್, ಶ್ರೀನಿವಾಸ ಉಡುಪ, ಕೆ.ಎಸ್.ಸುರೇಖಾ, ತಾರಿಕಾ, ಪ್ರಿಯಾಂಕಾ ಮುಂತಾದವರು ನಿಸಾರ್ ಅವರ ಆಯ್ದ ಗೀತೆಗಳನ್ನು ಹಾಡಲಿದ್ದಾರೆ.