ಮನೆಗಳ ಸಂಪ್‍ಗೆ ಹರಿದ ಸ್ಯಾನಿಟರಿ ನೀರು: ಮೇಯರ್ ಸಂಪತ್‍ರಾಜ್ ರನ್ನು ತರಾಟೆಗೆ ತೆಗೆದುಕೊಂಡ ಜನರು

ಬೆಂಗಳೂರು, ಸೆ.22-ಸ್ಯಾನಿಟರಿ ನೀರು ನಮ್ಮ ಮನೆಗಳ ಸಂಪ್‍ಗೆ ಸೇರುತ್ತಿದೆ… ವಾಸನೆ ತಡೆಯಲಾಗುತ್ತಿಲ್ಲ… ನಾವು ಬದುಕುವುದು ಹೇಗೆ..? ಹೀಗೆಂದು ಗಾಂಧಿನಗರದ ಜನತೆ ಮೇಯರ್ ಸಂಪತ್‍ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಗಾಂಧಿನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಿಸಲು ಮೇಯರ್ ಸಂಪತ್‍ರಾಜ್ ಆಗಮಿಸಿದ್ದ ವೇಳೆ ಇಲ್ಲಿನ ಜನತೆ ಸ್ಯಾನಿಟರಿ ನೀರು ಸಂಪ್‍ಗೆ ಸೇರುತ್ತಿರುವುದರಿಂದ ಗಬ್ಬುವಾಸನೆ ಬರುತ್ತಿದೆ, ಅಸಹ್ಯವಾಗುತ್ತಿದೆ. ಯಾವುದೇ ಕೆಲಸಗಳಿಗೂ ನೀರು ಬಳಕೆ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಕ್ಷಣ ಸಂಪ್‍ನಲ್ಲಿದ್ದ ನೀರಿನ ವಾಸನೆ ಗ್ರಹಿಸಿದ ಮೇಯರ್, ಕೂಡಲೇ ಅಧಿಕಾರಿಗಳ ವಿರುದ್ಧ ಗರಂ ಆದರು. ರಸ್ತೆ ಕಾಮಗಾರಿಯಿಂದಾಗಿ ಸ್ಯಾನಿಟರಿ ನೀರು ಮನೆಗಳ ಸಂಪ್‍ಗೆ ಬರುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಬಿಬಿಎಂಪಿ ಹಣದಲ್ಲಿ ಕೂಡಲೇ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಮುಗಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರನೆ ಅಡ್ಡರಸ್ತೆಯಲ್ಲಿ ಪರಿಶೀಲಿಸುತ್ತಿದ್ದಾಗ ರಸ್ತೆ ಕಾಮಗಾರಿ ತಡವಾಗಿದ್ದದ್ದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ 17 ರಸ್ತೆಗಳಲ್ಲಿ 129 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ಶೇ.60ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ವಿಳಂಬವಾಗಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಈ ವೇಳೆ ಸಂಪತ್‍ರಾಜ್ ಭರವಸೆ ನೀಡಿದರು.
ಹೈಕೋರ್ಟ್ ನೀಡಿರುವ ಗಡುವಿನ ಒಳಗೆ ರಸ್ತೆಗುಂಡಿ ಮುಚ್ಚಿಸುತ್ತೇವೆ. ಬೇರೆ ವಿಭಾಗದ ಅಧಿಕಾರಿಗಳನ್ನು ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಆದ್ಯತೆ ಮೇರೆಗೆ ಅಧಿಕಾರಿಗಳು ಗುಂಡಿ ಮುಚ್ಚಲಿದ್ದಾರೆ ಎಂದು ಈ ವೇಳೆ ಮೇಯರ್ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ