
ಬೆಂಗಳೂರು, ಸೆ.21 ಕಾಂಗ್ರೆಸ್ ಯಾವೊಬ್ಬ ಶಾಸಕರು ಮುಂಬೈಗೆ ಹೋಗಿಲ್ಲ. ಸರ್ಕಾರ ಸುಭದ್ರವಾಗಿದೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿಯವರ ಆಮಿಷಗಳಿಗೆ ಬಲಿಯಾಗಿ ಕೋಮುವಾದಿಗಳೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಧಾನ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಖಾತೆಗೆ ಹಾಕುತ್ತೇನೆ ಎಂದು ಹೇಳಿದ್ದ ಮೊತ್ತದ 100ಪಟ್ಟು ಹೆಚ್ಚು ಹಣ ನೀಡುತ್ತೇವೆ ಎಂದು ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ. ಆದರೆ ಈ ಯಾವುದೇ ಆಮಿಷಗಳಿಗೆ ನಮ್ಮವರು ಬಲಿಯಾಗಿಲ್ಲ. ಯಾರು ಮುಂಬೈಗೆ ಹೋಗುವುದಿಲ್ಲ. ಬಿಜೆಪಿಯವರ ಸರ್ಕಾರ ಅಸ್ಥಿರಗೊಳಿಸುವ ಸರ್ಕಾರ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಸಿದ್ಧಾಂತ ಮಾತನಾಡುವ ಬಿಜೆಪಿಯವರು ಅಧಿಕಾರಕ್ಕಾಗಿ ಹೀನಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಸೋತವರು ವಿರೋಧಪಕ್ಷವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಅನೀತಿಯುತ ಪ್ರಯತ್ನ ಮಾಡಬಾರದು. ರಾಜ್ಯದ ಜನ ಇದನ್ನು ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.