ಸರಿ-ತಪ್ಪು ವಿಶ್ಲೇಷಿಸಲು ಹೋಗುವುದಿಲ್ಲ: ಡಿಸಿಎಂ

ಬೆಂಗಳೂರು, ಸೆ.21 ಬಿಜೆಪಿಯವರ ಪ್ರಚೋದನಾತ್ಮಕಾರಿ ಹೇಳಿಕೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ನಾನು ಸರಿ-ತಪ್ಪು ವಿಶ್ಲೇಷಿಸಲು ಹೋಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು ಬೆಳಗ್ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಹೇಳಿಕೆ ನೀಡಲು ಕಾರಣವಾದ ಮೂಲದ ಬಗ್ಗೆ ನಾವು ಹುಡುಕಬೇಕಿದೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪದೇ ಪದೇ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಆಮಿಷ ತೋರಿಸಿ ಸೆಳೆಯುವ ಪ್ರಯತ್ನ ಮಾಡುವುದು. ರಾಜ್ಯದ ಮುಖ್ಯಮಂತ್ರಿ ಎಂಬ ಗೌರವವೂ ಇಲ್ಲದೆ ಅವಹೇಳನಕಾರಿ ಟೀಕೆ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗ ಕುಮಾರಸ್ವಾಮಿಯವರು ದಂಗೆ ಎಂಬ ಪದ ಬಳಸಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಹೊರಟಿರುವುದು ಸರಿಯಲ್ಲ. ನಾವೂ ಕೂಡ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ಕಾಂಗ್ರೆಸ್ ಶಾಸಕರಿಗೆ ಏನೆಲ್ಲಾ ಆಮಿಷವೊಡ್ಡಿದ್ದಾರೆ ಎಂಬುದರ ಸಹಿತ ಬಿಜೆಪಿ ನಾಯಕರು ಚರ್ಚೆ ನಡೆಸಿರುವ ಕಾಂಗ್ರೆಸ್ ನಾಯಕರನ್ನು ರಾಜ್ಯಪಾಲರ ಮುಂದೆ ನಿಲ್ಲಿಸುತ್ತೇವೆ ಎಂದು ಹೇಳಿದರು.

ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ತಪ್ಪು-ಸರಿ ಯಾವುದು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಲು ಬಯಸುವುದಿಲ್ಲ. ಬಿಜೆಪಿಯವರು ಅನಗತ್ಯವಾಗಿ ಪ್ರಚೋದನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರ ಆಡಳಿತ ನೀಡಲಿದೆ. ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಯಾವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಅವರ ಆಮಿಷಗಳಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಲಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕಾಂಗ್ರೆಸ್, ಬಿಜೆಪಿಗೆ ಉತ್ತಮ ಆಡಳಿತ ನೀಡಬೇಕೆಂಬ ಆಸೆ ಇದೆ. ಹಾಗಾಗಿ ನಿನ್ನೆ ತಡರಾತ್ರಿ 10.30ರವರೆಗೂ ನಾವು ಸಚಿವ ಸಂಪುಟ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿನ ಬರ, ನೆರೆ ವಿಷಯಗಳ ಕುರಿತು ಗಂಭೀರ ಚರ್ಚೆ ಮಾಡಿದ್ದೇವೆ. ಆದರೆ ಬಿಜೆಪಿಯವರಿಗೆ ರಾಜ್ಯದ ಹಿತಾಸಕ್ತಿ ಬೇಕಿಲ್ಲ. ಕೇವಲ ಅಧಿಕಾರದ ಆಸೆಗಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ