ಜಲ್ಸ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಕಾಂತ ಕನ್ನಳ್ಳಿ ಇದೀಗ ಇರುವುದೆಲ್ಲವ ಬಿಟ್ಟು ಎಂಬ ಎರಡನೇ ಚಿತ್ರ ತಯಾರಿಸಿದ್ದು 21ರಂದು ಬಿಡುಗಡೆಗೆ ಕಾಯುತ್ತಿದ್ದಾರೆ. ಜೀವನದ ಅನುಭವಗಳನ್ನು ತೆರೆ ಮೇಲೆ ತರಲಾಗಿದೆ ಎನ್ನುತ್ತಾರೆ ನಿರ್ದೇಶಕ ಕಾಂತ.ಕವಿ ಗೋಪಾಲಕೃಷ್ಣ ಅಡಿಗರ ಕವನ ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಸಾಲುಗಳನ್ನು ತೆಗೆದುಕೊಂಡು ಚಿತ್ರದ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರದಲ್ಲಿ ಒಂದು ಟ್ವಿಸ್ಟ್ ನೀಡಿರುವ ಅವರು, ಇಂದಿನ ಪ್ರೇಕ್ಷಕರಿಗೆ ಹತ್ತಿರವಾಗುವ ರೀತಿಯಲ್ಲಿ ಸಿನಿಮಾ ಮಾಡಿದ್ದು ಕೌಟುಂಬಿಕ ಪ್ರಧಾನ ಚಿತ್ರವಾಗಿದೆ ಎನ್ನುತ್ತಾರೆ.ಮೇಘನಾ ರಾಜ್, ತಿಲಕ್ ಮತ್ತು ಶ್ರೀ ಮಹದೇವ ಪ್ರಮುಖ ಪಾತ್ರದಲ್ಲಿದ್ದು ಚಿತ್ರದಲ್ಲಿ ವಿಲನ್ ಪಾತ್ರ ಇಲ್ಲವಂತೆ. ಜೀವನದಲ್ಲಿ ನಮ್ಮಲ್ಲಿ ಒಳ್ಳೆ ಗುಣಗಳೂ ಇರುತ್ತವೆ, ಅದೇ ರೀತಿ ಕೆಟ್ಟ ಗುಣಗಳು ಕೂಡ ಇರುತ್ತವೆ, ಅದನ್ನೇ ಚಿತ್ರದ ಪಾತ್ರಗಳಲ್ಲಿ ತಂದಿದ್ದೇನೆ, ಇಲ್ಲಿ ಪ್ರತಿ ಪಾತ್ರಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಮುಖಗಳನ್ನು ಹೊಂದಿವೆ ಎನ್ನುತ್ತಾರೆ.ತಮಿಳು ನಟ-ನಿರ್ದೇಶಕ ಸಿಲಂಬರಸನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇರುವುದೆಲ್ಲವ ಬಿಟ್ಟು ಚಿತ್ರಕ್ಕೆ ಶ್ರೀಧರ್ ವಿ ಸಂಗೀತ, ವಿಲನ್ ಡೇವಿಡ್ ಅವರ ಛಾಯಾಗ್ರಹಣವಿದೆ.