ಬೆಂಗಳೂರು, ಸೆ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಕೆಲಸಗಳಿಗೂ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆ..? ಜಡ್ಡುಗಟ್ಟಿರುವ ಬಿಬಿಎಂಪಿ ಆಡಳಿತ ನಡೆಸುವುದಕ್ಕಿಂತ ಹೈಕೋರ್ಟ್ ಸುಪರ್ದಿಗೆ ವಹಿಸುವುದೇ ಸೂಕ್ತವೇನೋ… ಹಾಗಾಗಿದೆ ಪರಿಸ್ಥಿತಿ.
ಬೆಂಗಳೂರು ಮಹಾನಗರದಲ್ಲಿ ತಲೆ ಎತ್ತಿದ್ದ ಜಾಹೀರಾತು ಮಾಫಿಯಾಕ್ಕೆ ಹಾಕಿದ ಕಡಿವಾಣ, 24 ಗಂಟೆಯೊಳಗೆ ರಸ್ತೆ ಗುಂಡಿ ಮುಚ್ಚಿಸಲು ನೀಡಿದ ಖಡಕ್ ಆದೇಶ, ರಾಸಾಯನಿಕ ವಿಷಯುಕ್ತ ನೀರಿನಿಂದ ಬೆಂಕಿ ಕಾಣಿಸಿಕೊಂಡ ಬೆಳ್ಳಂದೂರು ಕೆರೆಗೆ ಮುಕ್ತಿ, ಈ ಎಲ್ಲ ಅಂಶಗಳನ್ನು ಗಮನಿಸಿದರೆ ಬಿಬಿಎಂಪಿ ನ್ಯಾಯಾಲಯದ ಚಡಿ ಏಟು ಬೀಳುವವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೇನೋ. ಉದಾಸೀನ ಧೋರಣೆಯನ್ನು ಕೈಬಿಡುವುದಿಲ್ಲವೇನೋ ಎಂದೆನಿಸುತ್ತದೆ.
ಬೆಂಗಳೂರು ಮಹಾನಗರದಲ್ಲಿ ಜಾಹೀರಾತು ಹಾವಳಿ ಮಿತಿಮೀರಿತ್ತು. ಅಕ್ರಮ ಫ್ಲೆಕ್ಸ್, ಬ್ಯಾನರ್ಗಳ ಹಾವಳಿಯಿಂದ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಸಿಲಿಕಾನ್ ಸಿಟಿ ಸೌಂದರ್ಯಕ್ಕೆ ಧಕ್ಕೆ ಬಂದಿತ್ತು. ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕಳೆದ ಎರಡು ದಶಕಗಳಿಂದ ಸಾಧ್ಯವೇ ಆಗಿರಲಿಲ್ಲ. ಯಾವುದೇ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಇದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿರಲಿಲ್ಲ.
ಬಿಬಿಎಂಪಿಯಲ್ಲಿ ಯಾರೇ ಅಧಿಕಾರಕ್ಕೆ ಬಂದರೂ, ರಾಜ್ಯದಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಈ ಮಾಫಿಯಾಕ್ಕೆ ಶರಣಾಗುತ್ತಿತ್ತು. ಆದರೆ, ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಹೀರಾತು ಹಾವಳಿಯಿಂದ ನಗರವನ್ನು ಮುಕ್ತಿಗೊಳಿಸಿದೆ. ಯಾವಾಗ ನ್ಯಾಯಾಲಯ ಖಡಕ್ ಆದೇಶ ನೀಡಿತೋ ಅಧಿಕಾರಿಗಳು ಎದ್ದೆವೊ ಬಿದ್ದೆವೊ ಎಂದು ರಾತ್ರೋರಾತ್ರಿ ನಗರಾದ್ಯಂತ ಇದ್ದ ಎಲ್ಲ ಜಾಹೀರಾತುಗಳನ್ನು, ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದರು.
ಅದೇ ರೀತಿ ನಗರದಲ್ಲಿ ರಸ್ತೆಗಳ ಗುಂಡಿಗೆ ಬಲಿಯಾಗುವವರು, ಅಪಘಾತಕ್ಕೊಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆಯಾದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ತಮ್ಮ ಉದಾಸೀನ ಧೋರಣೆ ಮುಂದುವರಿಸುತ್ತಲೇ ಬಂದರು. ಯಾವುದಾದರೂ ಅವಘಡ ಸಂಭವಿಸಿದಾಗ ಅಥವಾ ಮಳೆ ಬಂದು ಅನಾಹುತಗಳಾದಾಗ ರಸ್ತೆ ಗುಂಡಿಗಳ ಲೆಕ್ಕ ಹಾಕುವುದು, ಮುಚ್ಚಿದ್ದೇವೆ ಎಂದು ಬಿಲ್ ಮಾಡುವುದು, ಬಿಬಿಎಂಪಿಯ ಕೆಲಸವಾಗಿತ್ತು. ಆದರೆ, ಅವಘಡಗಳು ಮಾತ್ರ ತಪ್ಪುತ್ತಿರಲಿಲ್ಲ. ಗುಂಡಿಗಳಿಲ್ಲದ ರಸ್ತೆಗಳೇ ಕಾಣುತ್ತಿರಲಿಲ್ಲ.
ಈ ಸಂಬಂಧ ಸಾರ್ವಜನಿಕರೊಬ್ಬರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 24 ಗಂಟೆಯೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಬಿಬಿಎಂಪಿಯನ್ನೇ ಮುಚ್ಚಬೇಕಾಗುತ್ತದೆ ಎಂಬ ಖಡಕ್ ಆದೇಶವನ್ನು ಯಾವಾಗ ನೀಡಿತೋ ತಡಬಡಾಯಿಸುತ್ತ ಎದ್ದ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಲು ಪ್ರಾರಂಭಿಸಿದರು.
ಎಲ್ಲ ವಾರ್ಡ್ಗಳ ಎಂಜಿನಿಯರ್ಗಳು ಕಾರ್ಯಪ್ರವೃತ್ತರಾದರು. ಪೈತಾನ್ ವಾಹನಗಳಿಗೆ ಚಾಲನೆ ನೀಡಲಾಯಿತು. ಇದುವರೆಗೂ ಕಾಣದಿದ್ದ ಗುಂಡಿಗಳೆಲ್ಲ ಕಾಣಲು ಪ್ರಾರಂಭಿಸಿದವು. ನಿನ್ನೆಯಿಂದಲೇ ಕಾರ್ಯಾಚರಣೆ ನಡೆಸಿ ನೂರಾರು ಗುಂಡಿಗಳನ್ನು ಮುಚ್ಚಲಾಯಿತು.
ಸಾರ್ವಜನಿಕರು ಎಷ್ಟೇ ಬಾಯಿ ಬಡಿದುಕೊಂಡಿದ್ದರೂ, ಯಾವುದೇ ಅನಾಹುತಗಳು ಸಂಭವಿಸಿದರೂ ಅಧಿಕಾರಿಗಳು ಈ ಕೆಲಸ ಮಾಡುತ್ತಿರಲಿಲ್ಲ. ಯಾವಾಗ ನ್ಯಾಯಾಲಯ ಖಡಕ್ ಆದೇಶ ನೀಡಿತೋ ಆಗ ಮೈ ಚಳಿ ಬಿಟ್ಟು ಕೆಲಸಕ್ಕಿಳಿದರು.
ಅದೇ ರೀತಿ ಬೆಳ್ಳಂದೂರು ಕೆರೆ ವಿಷಮಿಶ್ರಿತ ರಾಸಾಯನಿಕ ನೀರಿನಿಂದ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಆಗಲೂ ಬಿಬಿಎಂಪಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಎನ್ಜಿಇಟಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದಾಗ ಅದಕ್ಕೊಂದು ಪರಿಹಾರ ಕಂಡುಕೊಳ್ಳಲಾಯಿತು. ಬಹುತೇಕ ಎಲ್ಲ ಕೆಲಸಗಳಿಗೂ ನ್ಯಾಯಾಲಯವೇ ಮಧ್ಯಪ್ರವೇಶ ಮಾಡುವ ಪರಿಸ್ಥಿತಿ ಬಿಬಿಎಂಪಿಯಲ್ಲಿ ನಿರ್ಮಾಣವಾಗಿದೆ.
ಐಟಿ ಸಿಟಿ ಬೆಂಗಳೂರಿನಲ್ಲಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಘನತ್ಯಾಜ್ಯ ವಿಲೇವಾರಿ ಟೆಂಡರ್ ಹಗ್ಗ-ಜಗ್ಗಾಟ ನಡೆಯುತ್ತಲೇ ಇದೆ. ನಗರದ ಕಸದ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸದಿದ್ದರೆ ಅನಿವಾರ್ಯವಾಗಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕಾದ ಪ್ರಸಂಗ ಎದುರಾಗುವುದರಲ್ಲಿ ಆಶ್ಚರ್ಯವಿಲ್ಲ.