ಹೈಕೋರ್ಟ್ ಆದೇಶಕ್ಕೆ ಒಂದೇ ದಿನ 871 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಎಂದ ಮೇಯರ್

ಬೆಂಗಳೂರು, ಸೆ.20- ಒಂದೇ ರಾತ್ರಿಯಲ್ಲಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಒಟ್ಟು 871 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮಟ್ಟದ ಕೆಲಸ ಮಾಡಲಾಗುತ್ತಿದೆ. ನಾನೇ ಖುದ್ದು ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ ಎಂದರು.
ನಿನ್ನೆ ತರಾತುರಿಯಲ್ಲಿ ಕೆಲ ಅಧಿಕಾರಿಗಳು ಗುಂಡಿ ಮುಚ್ಚಿದ್ದಾರೆ. ಅವು ಕಳಪೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಒಂದು ವೇಳೆ ಕಳಪೆಯಾಗಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬೆಸ್ಕಾಂ, ಬಿಡಬ್ಲ್ಯೂಎಸ್‍ಎಸ್‍ಬಿ ಕಾಮಗಾರಿಗಳಿಂದ ರಸ್ತೆಗಳು ಈ ಮಟ್ಟಕ್ಕೆ ಹಾಳಾಗಿವೆ. ಎಷ್ಟೋ ಒಳ್ಳೆಯ ರಸ್ತೆಗಳನ್ನೇ ತಮ್ಮ ಕೆಲಸಗಳಿಗೆ ಅವರು ಅಗೆಯುತ್ತಾರೆ. ಹೊಸ ರಸ್ತೆಗಳ ನಿರ್ಮಾಣ ಕೂಡ ಆಗುತ್ತಿದೆ. ಆದಷ್ಟು ಬೇಗ ದೀರ್ಘಕಾಲ ಬಾಳುವಂತಹ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಉತ್ತಮವಾಗಿ ರಸ್ತೆಗುಂಡಿ ಮುಚ್ಚಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೋರ್ಟ್ ಆದೇಶದ ಮೇರೆಗೆ ಮಾಡಿರುವ ಕೆಲಸ. ಹಾಗಾಗಿ ನ್ಯಾಯಾಲಯ ಕಾಮಗಾರಿಗಳನ್ನು ಪರಿಶೀಲನೆ ಮಾಡಬಹುದು. ಆ ಎಚ್ಚರಿಕೆಯಿಂದಲೇ ಉತ್ತಮ ಗುಣಮಟ್ಟದ ಕೆಲಸ ಮಾಡಿದ್ದೇವೆ ಎಂದು ಮೇಯರ್ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ