ರೆಸಾರ್ಟ್ ರಾಜಕಾರಣದ ಬಗ್ಗೆ ನನಗೇನೂ ಗೊತ್ತಿಲ್ಲ: ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು, ಸೆ.20- ನಾವು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ. ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಯನ್ನೂ ಮುಂದಿಟ್ಟಿಲ್ಲ. ರೆಸಾರ್ಟ್ ರಾಜಕಾರಣದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಳಗ್ಗೆಯಿಂದ ತಮ್ಮ ಮನೆಯಲ್ಲೇ ಉಳಿದಿದ್ದ ಸಚಿವರು ಮಧ್ಯಾಹ್ನ 2.15ರ ಸುಮಾರಿಗೆ ಬೆಂಗಳೂರನ್ನು ಬಿಟ್ಟು ಸ್ವಕ್ಷೇತ್ರ ಬೆಳಗಾವಿಯ ಗೋಕಾಕ್‍ಗೆ ತೆರಳುತ್ತಿರುವುದಾಗಿ ಹೇಳಿ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜಕಾರಣ ನನಗೆ ಸಾಕಾಗಿ ಹೋಗಿದೆ. ಇನ್ನೊಮ್ಮೆ ನಮ್ಮ ಹೆಸರನ್ನು ಎಳೆದು ತರುತ್ತಿದ್ದಾರೆ. ನಾನು ಮಹಾರಾಷ್ಟ್ರ ಸೇರಿದಂತೆ ಎಲ್ಲಿಗೂ ಹೋಗಿಲ್ಲ. ಬಿಜೆಪಿಯ ಯಾವ ಮುಖಂಡರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್‍ನಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ. ವಾಲ್ಮೀಕಿ ಸಮುದಾಯದ ಶಾಸಕರು ಬಂದು ನನ್ನನ್ನು ಸಂಪರ್ಕಿಸುತ್ತಾರೆ. ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾನು ನಾಯಕತ್ವ ವಹಿಸುತ್ತೇನೆ. ಅದನ್ನೇ ಭಿನ್ನಮತ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.

ನಮ್ಮ ಸಮಸ್ಯೆಗಳು ಮತ್ತು ಬೇಡಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಜತೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ಹಂತ ಹಂತವಾಗಿ ಎಲ್ಲಾ ಬೇಡಿಕೆಗಳು ಈಡೇರುತ್ತವೆ. ಕೆಲವು ಒಮ್ಮೆಲೆ ಬಗೆಹರಿಯುವುದಿಲ್ಲ. ಬೇಡಿಕೆಗಳ ಕಾರಣಕ್ಕಾಗಿ ನಾನು ಪಕ್ಷ ಬಿಡುತ್ತೇನೆ, ರೆಸಾರ್ಟ್ ರಾಜಕೀಯ ಮಾಡುತ್ತೇನೆ ಎಂಬುದು ಸುಳ್ಳು ಮಾಹಿತಿ ಎಂದು ಅಲ್ಲಗಳೆದರು.
ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದು ನಿಜ. ಅವರ ಮತ್ತು ನನ್ನ ನಡುವೆ ಸುಮಾರು 30 ವರ್ಷಗಳ ಸ್ನೇಹವಿದೆ. ಅವರು ಮೂಲತಃ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯವರು. ನಮ್ಮ ಮನೆಯಲ್ಲಿ ನಡೆಯುವ ಪೂಜೆಗಳಿಗೆ ಬಂದು ಹೋಗುತ್ತಾರೆ. ನಾವು ಅವರ ಮನೆಗೆ ಹೋಗಿ ಬರುತ್ತೇವೆ. ಅವರಂತೆ ನನಗೆ ಮಹಾರಾಷ್ಟ್ರದಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಶಾಸಕ ನಾಗೇಂದ್ರ ಅವರಿಗೆ ಹೈದರಾಬಾದ್‍ನಲ್ಲಿ ಸ್ನೇಹಿತರಿದ್ದಾರೆ. ಹಾಗೆಂದ ಮಾತ್ರಕ್ಕೆ ರೆಸಾರ್ಟ್ ರಾಜಕೀಯಕ್ಕೆ ನಾವು ಸ್ನೇಹಿತರನ್ನು ಬಳಸಿಕೊಳ್ಳುತ್ತೇವೆ ಎಂಬುದು ತಪ್ಪು ಎಂದರು.

ನಾನು ಉಪಮುಖ್ಯಮಂತ್ರಿ ಎಂಬ ಬೇಡಿಕೆ ಮಂಡಿಸಿಲ್ಲ. ಈಗಿರುವ ಸಚಿವ ಸ್ಥಾನವನ್ನು ವಾಪಸ್ ತೆಗೆದುಕೊಂಡರೂ ಸಂತೋಷ. ನನಗೆ ಸಾಕಾಗಿ ಹೋಗಿದೆ. ಇಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಗಣೇಶೋತ್ಸವ ಇದ್ದು, ಸಂಜೆ 7 ಗಂಟೆಗೆ ಪೂಜೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಮಾಡಬೇಕು. ಅದಕ್ಕಾಗಿ ನಾನು ಅಲ್ಲಿಗೆ ತೆರಳುತ್ತಿದ್ದೇನೆ. ಇಲ್ಲಿಂದ ಹೊರಟು ಮತ್ತೆಲ್ಲಿಗೋ ಹೊಗುತ್ತೇನೆ ಎಂಬ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದರು.
ಯಾವ ಶಾಸಕರು ರೆಸಾರ್ಟ್‍ಗೆ ಹೋಗಿದ್ದಾರೋ, ಹೋಗುತ್ತಿದ್ದಾರೋ ನನಗೆ ಗೊತ್ತಿಲ್ಲ. ಬೇರೆಯವರ ವಿಷಯದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮತ್ತು ನಾಗೇಂದ್ರ ಇಲ್ಲೇ ನಿಮ್ಮ ಕಣ್ಣೆದುರಿಗೆ ಇದ್ದೇವೆ. ಬೆಳಗಾವಿ ಮತ್ತು ಬಳ್ಳಾರಿಯ ಇನ್ನೂ ಕೆಲವು ಶಾಸಕರು ತಮ್ಮನ್ನು ಭೇಟಿ ಮಾಡಲು ಬರುತ್ತಾರೆ. ಅವರು ರೆಸಾರ್ಟ್ ಹೋಗಿಲ್ಲ. ಇನ್ನು ನಿನ್ನೆ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿರುವ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳಿದರು.

ಶಾಸಕ ನಾಗೇಂದ್ರ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಬಳ್ಳಾರಿ ಜಿಲ್ಲೆಯ 6 ಮಂದಿ ಶಾಸಕರು ಒಟ್ಟಾಗಿದ್ದೇವೆ. ಹೈಕಮಾಂಡ್ ಯಾರನ್ನೇ ಸಚಿವರನ್ನಾಗಿ ಮಾಡಿದರೂ ನಾವೆಲ್ಲ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಬೆಳಗ್ಗೆಯಿಂದ ಸಚಿವ ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಿದ ಅವರು, ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ರಮೇಶ್ ಜಾರಕಿಹೊಳಿ ನಮ್ಮ ಸಮುದಾಯದ ಹಿರಿಯ ನಾಯಕರು. ಅವರು ವಾಲ್ಮೀಕು ಸಮುದಾಯಕ್ಕೆ ಎರಡು ಸಚಿವ ಸ್ಥಾನ ಕೊಡಬೇಕು ಮತ್ತು ಮೀಸಲಾತಿಯ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಅದನ್ನು ಹೊರತುಪಡಿಸಿ ಇಂಥಹವರನ್ನೇ ಸಚಿವರನ್ನಾಗಿ ಮಾಡಿ ಎಂದು ಹೇಳಿಲ್ಲ. ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಆನಂದ್‍ಸಿಂಗ್, ತುಕಾರಾಮ್, ಹೊಸದಾಗಿ ಆಯ್ಕೆಯಾಗಿರುವ ಗಣೇಶ್ ಸೇರಿದಂತೆ ಯಾರನ್ನೇ ಸಚಿವರನ್ನಾಗಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈ ಬಗ್ಗೆ ಯಾರ ಮುಂದೆಯೂ ಬೇಡಿಕೆ ಇಟ್ಟಿಲ್ಲ ಎಂದರು.

ಬಿಜೆಪಿಯ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ಬಿಜೆಪಿ ಶ್ರೀರಾಮುಲು ನಮ್ಮ ಸಂಬಂಧಿ, ಸಮುದಾಯದ ಹಿರಿಯ ನಾಯಕರು. ಜನಾಂಗದ ಅಭಿವೃದ್ಧಿ ವಿಷಯ ಬಂದಾಗ ಅವರ ಜತೆ ಮಾತನಾಡಿದ್ದೇನೆ. ಆದರೆ, ಪಕ್ಷದ ವಿಷಯ ಬಂದಾಗ ಅವರೊಂದಿಗೆ ಯಾವುದೇ ಚರ್ಚೆಗಳನ್ನು ಮಾಡಿಲ್ಲ. ನಾವು ಕಾಂಗ್ರೆಸ್‍ನಲ್ಲಿದ್ದೇವೆ. ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ