ಮುಂಬೈಗೆ ಹಾರಲು ಸಿದ್ದರಾದ 20ರಿಂದ 22 ಶಾಸಕರು

ಬೆಂಗಳೂರು,ಸೆ.20-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ ಜಾರಕಿಹೊಳಿ ಸಹೋದರರ ಭಿನ್ನಮತ ಮುಗಿಯಿತು ಎನ್ನುವಷ್ಟರಲ್ಲೇ ಮತ್ತೊಂದು ವಿಘ್ನ ಎದುರಾಗಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಅಸಮಾಧಾನಗೊಂಡಿರುವ ದೋಸ್ತಿ ಪಕ್ಷಗಳ ಸುಮಾರು 20ರಿಂದ 22 ಶಾಸಕರು ಮುಂಬೈಗೆ ಹಾರಲು ಸಿದ್ದರಾಗಿದ್ದು, ಸಮ್ಮಿಶ್ರ ಸರ್ಕಾರದ ಭವಿಷ್ಯವೇ ಡೋಲಾಯಮಾನವಾಗಿದೆ.

ಮುಂಬೈಗೆ ತೆರಳಲಿರುವ ಈ ಎಲ್ಲ ಶಾಸಕರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೂಚನೆ ಮೇರೆಗೆ ಕೊಲ್ಲಾಪುರದ ಸಚಿವ ಚಂದ್ರಕಾಂತ್ ಪಾಟೀಲ್ ಕರ್ನಾಟಕದ ಭಿನಮತೀಯ ಶಾಸಕರಿಗೆ ಆತಿಥ್ಯ ವಹಿಸಿಕೊಂಡಿದ್ದಾರೆ.
ಈಗಾಗಲೇ ಕೆಲವರು ಮುಂಬೈಗೆ ತೆರಳಿದ್ದರೆ ಇನ್ನು ಕೆಲವು ಶಾಸಕರು ರಸ್ತೆ ಮೂಲಕ ವಾಣಿಜ್ಯ ನಗರಿಯನ್ನು ತಲುಪಲಿದ್ದಾರೆ. ಸಂಜೆ ಸಭೆ ಸೇರಲಿರುವ ಈ ಭಿನ್ನಮತೀಯರು ನಾಳೆ ಅಥವಾ ನಾಡಿದ್ದು ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರು ಮುಂಬೈಗೆ ತೆರಳಲಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಕಳೆದ ರಾತ್ರಿಯೇ ಮುಂಬೈಗೆ ಶಾಸಕರು ತೆರಳಬೇಕಾಗಿತ್ತಾದರೂ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮೂಲಗಳ ಪ್ರಕಾರ ಬೆಳಗಾವಿ 5, ಬಳ್ಳಾರಿಯ 4, ಚಿಕ್ಕಬಳ್ಳಾಪುರದ 2, ರಾಯಚೂರು, ತುಮಕೂರಿನ ತಲಾ ಇಬ್ಬರು, ಶಿವಮೊಗ್ಗ, ಹಾವೇರಿ, ಕೊಪ್ಪಳ, ಹೊಸಕೋಟೆಯ ತಲಾ ಒಬ್ಬ ಶಾಸಕರು ಸೇರಿದಂತೆ ಒಟ್ಟು 16-18 ಶಾಸಕರು ಮುಂಬೈಗೆ ಹಾರಲು ಸಿದ್ಧರಾಗಿದ್ದಾರೆಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ನೇತೃತ್ವ:
ಅಂದಹಾಗೆ ಭಿನಮತೀಯ ಶಾಸಕರ ನೇತೃತ್ವವನ್ನು ಪೌರಾಡಳಿತ ಸಚಿವ ರಮೇಶ್ ಜಾರಕಿ ಹೊಳಿ ಹಾಗೂ ಹೊಸಕೋಟೆಯ ಶಾಸಕ ಎಂ.ಟಿ.ಬಿ.ನಾಗರಾಜ್ ವಹಿಸಿಕೊಂಡಿದ್ದಾರೆ.
ನಿನ್ನೆಯಷ್ಟೇ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ ಕಳೆದ ರಾತ್ರಿ ಎಲ್ಲ ಭಿನ್ನಮತೀಯರಿಗೆ ದೂರವಾಣಿ ಮೂಲಕ ಕರೆ ಮಾಡಿ ರೆಸಾರ್ಟ್‍ಗೆ ಹೊರಡಲು ಸಿದ್ದರಾಗಬೇಕೆಂದು ಸೂಚಿಸಿದ್ದಾರೆ.
ಜಾರಕಿಹೊಳಿಗೆ ಹೊಸಕೋಟೆಯ ಶಾಸಕ ಎಂ.ಟಿ.ಬಿ.ನಾಗರಾಜ್ ಕೈಜೋಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೀಕರ್ ಅನುಮತಿ ಕೇಳಿದ ಶಾಸಕರು:
ಮುಂಬೈನಲ್ಲಿ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿಗೆ ಆಗಮಿಸುವ ಶಾಸಕರು ನಾಳೆ ಇಲ್ಲವೇ ಶನಿವಾರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲಿದ್ದಾರೆ ಎನ್ನಲಾಗಿದೆ.
ಬಳಿಕ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ಇವರೆಲ್ಲರೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈಗೆ ತೆರಳಿರುವ ಶಾಸಕರು:
ರಮೇಶ್ ಜಾರಕಿಹೊಳಿ
ಶ್ರೀಮಂತ ಪಾಟೀಲ
ಮಹಾಂತೇಶ ಕಮಟಿಹಳ್ಳಿ
ಆನಂದ್ ಸಿಂಗ್
ಬಿ.ನಾಗೇಂದ್ರ
ಗಣೇಶ್
ಭೀಮಾನಾಯಕ್
ರಾಜ ವೆಂಕಟಪ್ಪ ನಾಯಕ್
ಬಿ.ಸತ್ಯನಾರಾಯಣ
ಬಿ.ಸಿ.ಪಾಟೀಲ್
ಬಿ.ಕೆ.ಸಂಗಮೇಶ್
ನಾಗೇಶ್
ಆರ್.ಶಂಕರ್
ಎಂ.ಟಿ.ಬಿ.ನಾಗರಾಜ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ