ಸಮ್ಮಿಶ್ರ ಸರ್ಕಾರ ರಕ್ಷಣೆಗೆ ಮುಂದಾದ ಮಾಜಿ ಸಿಎಂ ಸಿದರಾಮಯ್ಯ

 

ಬೆಂಗಳೂರು,ಸೆ.17-ರಾಜ್ಯ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸಲು ಹೈಕಮಾಂಡ್ ಸೂಚನೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದ್ದಾರೆ.

ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಸುಧಾಕರ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾದ ಹಲವು ಶಾಸಕರೊಂದಿಗೆ ದೂರವಾಣಿ ಮೂಲಕವೂ ಮಾತುಕತೆ ನಡೆಸಿ ಭಿನ್ನಮತ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಿದ್ದಾರೆ.ಅಲ್ಲದೆ 19ರಂದು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪಮುಖ್ಯಮಂತ್ರಿ ಪರಮೇಶ್ವರ್, ಸಂಸದೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರೊಡಗೂಡಿ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ಬಗ್ಗೆ ಕೂಡ ರಾಹುಲ್ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ 18ರಂದು ಈ ಎಲ್ಲ ನಾಯಕರು ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿಯ ಭಿನ್ನಮತ ಮತ್ತೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕೆಂದು ಪಕ್ಷದ ಉಸ್ತುವಾರಿ ವೇಣುಗೋಪಾಲ್ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ದೂರವಾಣಿಯಲ್ಲಿ ಜಾರಕಿಹೊಳಿ ಸಹೋದರರೊಂದಿಗೆ ಮಾತುಕತೆ ನಡೆಸಿದ್ದರು.
ರಮೇಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಅವರು ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ಕೆಲಕಾಲ ಮಾತುಕತೆ ನಡೆಸಿದರು.
ಬಿಜೆಪಿ ಪಕ್ಷ ಹೊಸ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ. ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಿಯೇ ಮಾಡುತ್ತೇವೆ ಎಂದು ಹೊಸ ತಂತ್ರಗಳನ್ನು ಹೆಣೆಯುತ್ತಲೇ ಇದೆ. ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಏನೂ ಆಗುವುದಿಲ್ಲ ಎಂದು ನಿರ್ಲಿಪ್ತರಾಗಿದ್ದಾರೆ.
ಆದರೆ ಪ್ರತಿದಿನ ಪ್ರತಿ ಕ್ಷಣ ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಅತೃಪ್ತ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ತನ್ನ ತಂತ್ರವನ್ನು ಮುಂದುವರೆಸಿದೆ.

ಈಗಾಗಲೇ ಯಲ್ಲಾಪುರದ ಶಾಸಕ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಪಕ್ಷ ಬಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಅದೇ ರೀತಿ ಬಳ್ಳಾರಿಯ ಆನಂದ್ ಸಿಂಗ್, ನಾಗೇಂದ್ರ, ಗಣೇಶ್ ಮತ್ತು ಶ್ರೀಮಂತ ಪಾಟೀಲ್, ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಶಾಸಕರೊಂದಿಗೆ ಬಿಜೆಪಿಯವರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.ಅದೇ ರೀತಿ ಉಳಿಸಿಕೊಳ್ಳುವ ಪ್ರಯತ್ನವೂ ಕೂಡ ನಡೆಯುತ್ತಲೇ ಇದೆ.ಭಿನ್ನಮತೀಯ ಚಟುವಟಿಕೆಗಳು ನಡೆಯುತ್ತಿವೆ. ಬೆಳಗಾವಿಯ ಆರ್ಥಿಕ ಸಂಕಷ್ಟದಲ್ಲಿದ್ದ ಶಾಸಕರನ್ನಷ್ಟೇ ಗುರುತಿಸಿ ಗಾಳ ಹಾಕಿದ್ದ ಬಿಜೆಪಿಯವರು ಈಗ ಅಧಿಕಾರ ಬಯಸುವ ಶ್ರೀಮಂತ ಶಾಸಕರನ್ನೂ ಗುರುತಿಸಿ ತನ್ನತ್ತ ಸೆಳೆಯುವ ತಂತ್ರ ಹೆಣೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ರಾಜಕೀಯ ಮೇಲಾಟಗಳು ನಡೆಯುತ್ತಲೇ ಇವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ