ಸರ್ಕಾರ ಬಿದ್ದರೆ ಹೊಸ ಸರ್ಕಾರ ಮಾಡಲು ಸಿದ್ಧರಾಗಿ: ಅಮಿತ್ ಶಾ

ಬೆಂಗಳೂರು,ಸೆ.17- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದರೆ ಸರ್ಕಾರ ರಚಿಸುವ ಸಂಬಂಧ ತಕ್ಷಣವೇ ರಾಜ್ಯ ನಾಯಕರು ಕಾರ್ಯ ಪ್ರವೃತ್ತರಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.

ಈ ಸಂಬಂಧ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವ ಅಮಿತ್ ಷಾ, ಸರ್ಕಾರ ತನ್ನಷ್ಟಕ್ಕೆ ತಾನು ಬಿದ್ದು ಹೋದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸರ್ಕಾರ ರಚಿಸಲು ಕಾರ್ಯಪ್ರವೃತ್ತರಾಗಿ ಎಂದು ಮುನ್ಸೂಚನೆ ನೀಡಿದ್ದಾರೆ.

ಸರ್ಕಾರ ರಚನೆಗೆ ಕೇವಲ ಬೆರಳೆಣಿಕೆಯ ಶಾಸಕರ ಅಗತ್ಯವಿರುವುದರಿಂದ ಸಮ್ಮಿಶ್ರ ಸರ್ಕಾರದ ಗೊಂದಲವನ್ನೇ ಲಾಭ ಮಾಡಿಕೊಂಡು ಕಳೆದುಕೊಂಡಿರುವ ಅಧಿಕಾರವನ್ನು ಮತ್ತೆ ಹಿಡಿಯಲು ರಾಜ್ಯ ನಾಯಕರೆಲ್ಲರೂ ಸಜ್ಜಾಗಬೇಕೆಂದು ನಿರ್ದೇಶನ ಕೊಟ್ಟಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬುಧವಾರ ವಿಶೇಷ ಶಾಸಕಾಂಗ ಸಭೆ ಕರೆದಿರುವ ವಿಚಾರ ರಾಜಕೀಯ ವಲಯದಲ್ಲಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತನ್ನ ಆಂತರಿಕ ಕಚ್ಚಾಟ ಹಾಗೂ ಬಿನ್ನಭಿಪ್ರಾಯದಿಂದಲೇ ಬಿದ್ದು ಹೋಗಿದೆ ಎಂಬಂತೆ ಸಾರ್ವಜನಿಕರಲ್ಲಿ ಅಭಿ ಪ್ರಾಯ ಮೂಡಿಸಬೇಕು.ಈ ಬೆಳವಣಿಗೆಯಲ್ಲಿ ಎಲ್ಲಿಯೂ ಬಿಜೆಪಿ ಪಾತ್ರವಿದೆ ಎಂಬುದು ಜನರು ಭಾವಿಸಬಾರದು.ಈ ಬಗ್ಗೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಪಕ್ಷಕ್ಕಾಗಲಿ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಷಾ ಸೂಚಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದಲೇ ಪತನವಾಯಿತು. ಇದರಲ್ಲಿ ಬಿಜೆಪಿ ಪಾತ್ರ ಏನೇನೂ ಇಲ್ಲ.ನಾವು ಯಾವುದೇ ಶಾಸಕರಿಗೂ ಯಾವುದೇ ಆಮಿಷವನ್ನೂ ಒಡ್ಡಿಲ್ಲ. ಸರ್ಕಾರದ ನಡವಳಿಕೆಯಿಂದ ಬೇಸತ್ತು ಶಾಸಕರು ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. 104 ಸ್ಥಾನ ಪಡೆದಿರುವ ನಾವು ಸರ್ಕಾರ ರಚನೆ ಮಾಡಿದ್ದೇವೆ ಎಂಬುದು ಜನರಿಗೆ ಮನವರಿಕೆಯಾಗಬೇಕು. ಈ ರೀತಿಯ ಕಾರ್ಯತಂತ್ರ ರೂಪಿಸಿ ಎಂದು ಹೇಳಿದ್ದಾರೆ.

ರೆಸಾರ್ಟ್‍ನತ್ತ ಶಾಸಕರು?:
ಯಾವಾಗ ರಾಷ್ಟ್ರೀಯ ಅಧ್ಯಕ್ಷರಿಂದಲೇ ಇಂಥ ಸೂಚನೆ ಬಂದಿತೋ ಎಲ್ಲರಲ್ಲೂ ಹುರುಪು ಮೂಡಿಸಿದೆ. ಕಾರ್ಯಪ್ರವೃತ್ತರಾಗಿರುವ ಬಿಎಸ್‍ವೈ, ಮುಂದಿನ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು ಬುಧವಾರ ಶಾಸಕಾಂಗ ಸಭೆ ಕರೆದಿದ್ದಾರೆ.ಮೂಲಗಳ ಪ್ರಕಾರ ಶಾಸಕಾಂಗ ಸಭೆ ಮುಗಿದ ಬಳಿಕ ಬಿಜೆಪಿಯ ಎಲ್ಲ ಶಾಸಕರು ರೆಸಾರ್ಟ್‍ಗೆ ತೆರಳಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್-ಜೆಡಿಎಸ್‍ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈ ಮೀರುತ್ತಿದೆ.ತಮ್ಮ ಪಕ್ಷದ ಶಾಸಕರನ್ನು ಸೆಳೆಯಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಬಿಜೆಪಿ ಈ ಕಾರ್ಯತಂತ್ರ ಹೆಣೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ