ಬೆಂಗಳೂರು, ಸೆ.17-ರಾಜ್ಯ ಸಮ್ಮಿಶ್ರ ಸರ್ಕಾರ ಉರುಳುವ ಭೀತಿ ನದುವೆಯೂ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ.ತಿಂಗಳಾಂತ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ ಹೈಕಮಾಂಡ್ ನಿರ್ಧರಿಸಿದ್ದು, ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಜೊತೆ ಚರ್ಚಿಸಲು ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ದಿನೇಶ್ಗುಂಡೂರಾವ್, ಈಶ್ವರ್ ಖಂಡ್ರೆ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಮತ್ತಿತರರು ಇದೇ 19 ರಂದು ದೆಹಲಿಗೆ ತೆರಳಿದ್ದಾರೆ.
ಖಾಲಿ ಉಳಿದಿರುವ ಆರು ಸಚಿವ ಸ್ಥಾನ, ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹೈಕಮಾಂಡ್ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿದೆ.
ಅಲ್ಲದೆ, ರಾಜ್ಯದಲ್ಲಿ ಉಂಟಾಗಿರುವ ಕಾಂಗ್ರೆಸ್ನ ಆಂತರಿಕ ಭಿನ್ನಮತಕ್ಕೂ ಅಂತ್ಯ ಹಾಡಲಿದೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡಿದರೆ ಸದ್ಯ ತಲೆದೋರಿರುವ ಅಸಮಾಧಾನ ದೂರವಾಗಬಹದು ಎಂಬ ಲೆಕ್ಕಾಚಾರವನ್ನು ಹೈಕಮಾಂಡ್ ವರಿಷ್ಠರು ಮಾಡಿದ್ದಾರೆ. ಹಾಗಾಗಿ ಮುಹೂರ್ತ ನಿಗದಿ ಮಾಡಲು ಇದೇ 19 ರಂದು ದೆಹಲಿಗೆ ಬರುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು, ಆಪರೇಷನ್ ಕಮಲ ಮುಂತಾದ ವಿಷಯಗಳ ಬಗ್ಗೆ ಹೈಕಮಾಂಡ್ ನಾಯಕರು ಮಾಹಿತಿ ಪಡೆದಿದ್ದು, ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವಂತೆ ಸೂಚನೆ ಕೂಡ ನೀಡಿದ್ದಾರೆ. ಈ ಹಿಂದೆಯೇ ತಿಳಿಸಿದಂತೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಮಾಡಲಾಗುವುದು. ಆರು ಮಂದಿ ಸಚಿವರು ಹಾಗೂ 33 ನಿಗಮ ಮಂಡಳಿಗಳ ನೇಮಕ ಮಾಡಲು ನಿರ್ಧರಿಸಲಾಗಿದೆ. 33 ನಿಗಮ ಮಂಡಳಿಗಳಲ್ಲಿ 22 ನಿಗಮ ಮಂಡಳಿಗಳು ಕಾಂಗ್ರೆಸ್ ಪಕ್ಷದ ಶಾಸಕರಿಗೆ ದೊರೆಯಲಿವೆ. ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಿ ಹೈಕಮಾಂಡ್ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ.
ಒಟ್ಟಾರೆ ಅಂದುಕೊಂಡಂತೆ ಆದರೆ ತಿಂಗಳಾಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕಾತಿ ನಡೆಯಲಿದೆ.