ಬೆಂಗಳೂರು, ಸೆ.15- ಕೊಡಗಿನ ವಾಯುವ್ಯ ಭಾಗದ ಏಳು ಪ್ರದೇಶಗಳಲ್ಲಿ ಜಲ ಪ್ರಳಯದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುರ್ನವಸತಿಗಾಗಿ ವಿಶೇಷ ವಿಪತ್ತು ನಿರ್ವಹಣಾ ಮಂತ್ರಾಲಯ ಮತ್ತು ಈ ಯೋಜನೆ ಪೂರ್ಣವಾಗುವವರೆಗೆ ಮಂತ್ರಿಯೊಬ್ಬರನ್ನು ನೇಮಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.
ಹಾರಂಗಿ ಜಲಾಶಯದ ಪ್ರದೇಶದಲ್ಲಿನ ವಾಯುವ್ಯ ಕೊಡಗಿನಲ್ಲಿ ಸಂಭವಿಸಿದ ಈ ದುರಂತದಲ್ಲಿ ಸಂತ್ರಸ್ತರಾದವರಿಗೆ ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲು ಪ್ರತ್ಯೇಕ ಸಚಿವಾಲಯ ಹಾಗೂ ವಿಪತ್ತು ನಿರ್ವಹಣಾ ಮಂಡಳಿಯನ್ನು ನೇಮಿಸಿದಾಗ ಮಾತ್ರ ಜನರಿಗೆ ಸೂಕ್ತ ರೀತಿಯಲ್ಲಿ ನೆರವು ದೊರೆಯಲಿದೆ.
ಇದಕ್ಕಾಗಿ ಮೂಲ ಇಲಾಖೆಯಿಂದ ದಕ್ಷ ರೆವಿನ್ಯೂ ಅಧಿಕಾರಿಗಳು, ಸರ್ವೆ ಅಧಿಕಾರಿಗಳು, ಕೃಷಿ ಇಲಾಖೆಯ ತಜ್ಞರು, ನೀರಾವರಿ ತಜ್ಞರು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು, ಸಿವಿಲ್ ಇಂಜಿನಿಯರ್ಗಳು ಸೇರಿದಂತೆ ಮೂಲ ಸೌಕರ್ಯ ಅಭಿವೃದ್ದಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆ.
ಇಂತಹ ಪರಿಪೂರ್ಣ ಕೆಲಸಕ್ಕೆ ಅಗತ್ಯವಾದ ಪ್ರತ್ಯೇಕ ಮಂತ್ರಾಲಯ ಮತ್ತು ಸಚಿವರನ್ನು ನೇಮಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಪುನರ್ವಸತಿ ಹೆಸರಿನಲ್ಲಿ ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ಕುಳಗಳು ತಲೆ ಎತ್ತುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆ ಕಲ್ಪಿಸಬೇಕಿದೆ.
ಶಾಶ್ವತ ಪುನರ್ವಸತಿ ಕಾರ್ಯ ನಡೆಯುವವರೆಗೆ ಅಂದರೆ ಸುಮಾರು 10 ವರ್ಷಗಳ ಕಾಲ ಸ್ಥಳೀಯರ ಜೀವನ ನಿರ್ವಹಣೆಗೆ ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆರ್ಥಿಕ ಸಹಾಯಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಭೂ ಕುಸಿತದಿಂದಾಗಿ ಕೊಡಗಿನವರ ದುರಂತವೇ ವಿಭಿನ್ನವಾಗಿದ್ದು, ಇವರು ಸರ್ವಸ್ವವನ್ನು ಕಳೆದುಕೊಂಡಿದ್ದಾರೆ. ಇವರದು ಒಂದು ವಿಧವಾದರೆ ನೆರೆ ಹಾವಳಿಯಿಂದ ಪರಿಹಾರ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರು ಮತ್ತೆ ತಮ್ಮ ನೆಲೆಗಳಿಗೆ ತೆರಳುವವರದು ಇನ್ನೊಂದು ವಿಧ. ವಿಪರೀತ ಮಳೆಯಿಂದಾಗಿ ಕಾಫಿ, ತೋಟ, ಗದ್ದೆ ನಷ್ಟವಾದವರದು ಮತ್ತೊಂದು ವಿಧದ ಸಂತ್ರಸ್ತರಾಗಿದ್ದು, ಈ ಮೂವರನ್ನು ಒಟ್ಟಿಗೆ ಸೇರಿಸಿ ನೈಜ್ಯ ಭೂ ಕುಸಿತದಂತಹ ದುರಂತದಿಂದ ಸಂತ್ರಸ್ತರಾದವರ ಕಲ್ಯಾಣಕ್ಕೆ ಮತ್ತೆ ಪುನರ್ವಸತಿಗೆ ತಲುಪಲಿರುವ ಪ್ಯಾಕೇಜ್ನ ದಿಕ್ಕು ತಪ್ಪಿಸಬಾರದು ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ಕೊಡವ ನಾಡನ್ನು ನಿರ್ನಾಮ ಮಾಡಲು ಕಾರಣವಾದ ಹಾರಂಗಿ ಜಲಾಶಯವನ್ನು ಸಂಪೂರ್ಣವಾಗಿ ಕಿತ್ತು ಹಾಕಬೇಕು. ಜಲಾಶಯದ ನೀರಿನ ತೀವ್ರ ಒತ್ತಡದಿಂದ ಭೂ ಕುಸಿತ ಉಂಟಾಗಿ ಭೂಗರ್ಭಕ್ಕೆ ಸೇರುವ ಜನರ ಪುರ್ನವಸತಿಯನ್ನು ಅದೇ ಸ್ಥಳದಲ್ಲಿ ಮಾಡಬೇಕು. ಅದಕ್ಕೂ ಮೊದಲು ಹಾರಂಗಿ ಜಲಾಶಯವನ್ನುಸಂಪೂರ್ಣ ಬಿಚ್ಚಬೇಕು ಎಂದು ಒತ್ತಾಯಿಸಿದರು.