ಬಿಜೆಪಿ ಹಣಿಯಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ ಕಾರ್ಯತಂತ್ರ

ಬೆಂಗಳೂರು,ಸೆ.15-ಒಂದು ಕಡೆ ಬಿಜೆಪಿ ಆಪರೇಷನ್ ಕಮಲ ಮಾಡೋಕೆ ರೆಡಿಯಾಗುತ್ತಿದ್ದರೆ, ಇತ್ತ ಯಡಿಯೂರಪ್ಪ ಮತ್ತವರ ತಂಡದವರನ್ನು ಹಣಿಯುವುದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ ಕಾರ್ಯತಂತ್ರ ರೂಪಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಮುಂದಾಗಿರುವ ಯಡಿಯೂರಪ್ಪ ಮತ್ತು ಅವರ ತಂಡವನ್ನು ಕಟ್ಟಿ ಹಾಕಲು ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ. 2008 ರಿಂದ 2013 ರವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ, ಆಕ್ರಮ ಗಣಿಗಾರಿಕೆ ಮಾಡಿದ್ದು, ಅದರ ಕಡತವನ್ನು ಮರು ಪರಿಶೀಲನೆಗೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಅದರಲ್ಲಿ ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ, ಶಾಸಕ ಬಿ. ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಸಿಲುಕಿಸಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಬಹುದು ಎಂಬ ಪ್ರತಿತಂತ್ರ ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗಿದೆ.
2008 ರಿಂದ 2013 ರವರೆಗೂ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ನಾಯಕರುಗಳು, ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದು ಈಗ ಇತಿಹಾಸ. ಅದೇ ಪ್ರಕರಣಗಳನ್ನು ರಿ ಓಪನ್ ಮಾಡಿದ್ದೇ ಅದ್ರೆ, ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕುವುದು ಸುಲಭ ಎಂಬುದನ್ನು ಅರಿತ ಸಿಎಂ ಕುಮಾರಸ್ವಾಮಿ, ಮೂವರೂ ನಾಯಕರನ್ನು ಕಟ್ಟಿ ಹಾಕಲು ಈ ತಂತ್ರ ಹೆಣೆದಿದ್ದಾರೆ.
ಈ ಹಿಂದೆ ಓಎಂಸಿ (ಓಬಳಾಪುರಂ ಮೈನಿಂಗ್ ಕಂಪನಿ) ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮತ್ತೆ ಅದೇ ಪ್ರಕರಣದಲ್ಲಿ ಸಿಲುಕಿಸುವ ತಂತ್ರ ಮಾಡಲಾಗಿದೆ.
ಅಷ್ಟಕ್ಕೂ ಓಬಳಾಪುರಂ ಮೈನಿಂಗ್ ಕಂಪನಿಯ ಪ್ರಕರಣವೇನು? ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂಪನಿ ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿದೆ. ಆದರೆ ಆಂಧ್ರಪ್ರದೇಶದ ಗಡಿ ಭಾಗದಿಂದ ಕರ್ನಾಟಕದ ಗಡಿ ಭಾಗವನ್ನು ಅಕ್ರಮ ಗಣಿಗಾರಿಕೆಗಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ನಿಖರ ಮಾಹಿತಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಕಳೆದ ಜುಲೈನಲ್ಲಿ ಹೊರಬಿದ್ದಿರುವ ತೀರ್ಪಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಮಾಡಿರುವುದು ಸ್ಪಷ್ಟವಾಗಿದೆ.

ಆಂಧ್ರದ ಗಡಿಭಾಗ ಎಂದು ಕರ್ನಾಟಕದ 7 ಕಿಮೀ ಗಡಿಭಾಗವನ್ನು ಅಕ್ರಮವಾಗಿ ಬಳಸಿಕೊಂಡಿದ್ದು, ಇದರ ಒಟ್ಟು 112 ಪುಟಗಳ ವರದಿ ಕುಮಾರಸ್ವಾಮಿ ಕೈ ಸೇರಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ರೆಡ್ಡಿಯನ್ನು ಮಟ್ಟ ಹಾಕಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪಗೂ ಸಂಕಷ್ಟ:
ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಬೇಕೆಂದರೆ ಕೇವಲ ಜನಾರ್ದನ ರೆಡ್ಡಿಗೆ ಬಿಸಿ ಮುಟ್ಟಿಸಿದರೇ ಸಾಲುವುದಿಲ್ಲ. ಅವರ ಜೊತೆಗೆ ಡಿಸಿಎಂ ಆಗುವ ಕನಸು ಕಾಣುತ್ತಿರುವ ಶ್ರೀರಾಮುಲು ಮತ್ತು ಯಡಿಯೂರಪ್ಪರನ್ನು ಪ್ರಕರಣದಲ್ಲಿ ಸೇರಿಸಬೇಕಿದೆ. ಹೀಗಾದಾಗ ಮಾತ್ರ ಆಪರೇಷನ್ ಕಮಲಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸಾಧ್ಯ ಎನ್ನುವುದನ್ನು ಕುಮಾರಸ್ವಾಮಿ ಅರಿತಿದ್ದು, ಇದಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಸಿಎಂ ಹೆಚ್.ಡಿ. ಕುಮಾರಸ್ವಾಮಿ, ರೆಡ್ಡಿ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸ್ನೇಹಿತ ಡಿಸಿಎಂ ಆಗಬೇಕು ಅಂದರೆ, , ಸದ್ಯ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಪತನವಾಗಬೇಕು. ಜೊತೆಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅದಕ್ಕೆ ಆಪರೇಷನ್ ಕಮಲ ಮಾಡಲೇಬೇಕು. ಆಪರೇಷನ್ ಕಮಲಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ಆವಶ್ಯಕತೆ ಇದ್ದು, ಇದನ್ನು ಗಾಲಿ ಜನಾರ್ದನ ರೆಡ್ಡಿ ಕೊಡಲು ಸಿದ್ಧರಾಗಿದ್ದಾರೆ ಎನ್ನಲಾಗಿತ್ತು.

ಇತ್ತ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ ನಡೆದಿರುವ ಅಕ್ರಮದಲ್ಲಿ ಗಾಲಿ ಜನಾರ್ದನ ರೆಡ್ಡಿಯನ್ನೇ ಫಿಟ್ ಮಾಡಿದ್ರೆ, ಆಪರೇಷನ್ ಕಮಲ ನಿಲ್ಲುತ್ತೆ ಎಂಬುದನ್ನು ಕುಮಾರಸ್ವಾಮಿ ಮನಗಂಡಿದ್ದಾರೆ. ಇದರಿಂದ ಗಾಲಿ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸಲುವಾಗಿ 300 ಕೋಟಿ ರೂ. ದೇಣಿಗೆ ನೀಡುವುದಕ್ಕೆ ಬ್ರೇಕ್ ಹಾಕಬಹುದು. ಜೊತೆಗೆ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸಬಹುದು ಎನ್ನುವ ಮಾಸ್ಟರ್ ಪ್ಲಾನ್ ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗಿದೆ.

ಒಂದು ಓಬಳಾಪುರಂ ಮೈನಿಂಗ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ಕರ್ನಾಟಕದ ಗಡಿಭಾಗದಲ್ಲೂ ನಡೆದಿದೆ ಎಂದು ಪ್ರಕರಣ ದಾಖಲಾದರೆ, ಸಾಕು, ಮೊದಲು ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಯಡಿಯೂರಪ್ಪರನ್ನು ಕಟ್ಟಿ ಹಾಕಬಹುದು. ಆಗ ಸರ್ಕಾರ ಸುಭದ್ರವಾಗಿರುತ್ತೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.
ಮುಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡೆಯೇನು? ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ