ಕಸ ಗುಡಿಸಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಪ್ರಧಾನಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಸಮಾಜದ ಎಲ್ಲಾ ವರ್ಗಗಳು ಮತ್ತು ದೇಶದ ಪ್ರತಿ ಭಾಗಗಳ ಜನರು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 9 ಕೋಟಿ ಶೌಚಾಲಯಗಳು ಮತ್ತು ನಾಲ್ಕೂವರೆ ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ ಎಂದರು.

ಸ್ವಚ್ಛತಾ ಸೇವೆ ಅಭಿಯಾನ ಮಹಾತ್ಮಾ ಗಾಂಧಿಯವರ ಹುಟ್ಟುಹಬ್ಬ ಅಕ್ಟೋಬರ್ 2ರವರೆಗೆ ಮುಂದುವರಿಯಲ್ಲಿದ್ದು, ನಮ್ಮ ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ದೇಶದ ಜನರು ತಮ್ಮನ್ನು ತಾವು ಸ್ವಚ್ಛತೆಗೆ ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ಪ್ರಮುಖ ಧಾರ್ಮಿಕ ನಾಯಕರ ಜೊತೆ ಮತ್ತು ಗಣ್ಯರ ಜೊತೆ ಸಂವಾದ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಮಿತಾಬ್ ಬಚ್ಚನ್, ರತನ್ ಟಾಟಾ ಮೊದಲಾದವರು ಸ್ವಚ್ಛ ಅಭಿಯಾನದಲ್ಲಿ ತಮ್ಮ ಕೆಲಸದ ಅನುಭವಗಳನ್ನು ಹಂಚಿಕೊಂಡರು.

ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ 40ರಿಂದ ಶೇಕಡಾ 90ರಷ್ಟು ಶುಚಿತ್ವವಾಗಿದೆ. 450ಕ್ಕೂ ಹೆಚ್ಚು ಜಿಲ್ಲೆಗಳು ಬಯಲು ಶೌಚ ಮುಕ್ತವಾಗಿದೆ ಎಂದರೆ ಆಶ್ಚರ್ಯವಾಗಬಹುದು. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳೆದ ನಾಲ್ಕು ವರ್ಷಗಳಲ್ಲಿ ಬಯಲು ಶೌಚ ಮುಕ್ತವಾಗಿದೆ. ಸ್ವಚ್ಛ ಹಿ ಸೇವಾ ಅಭಿಯಾನ ಆರಂಭದ ದಿನವಾದ ಇಂದು ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಈ ವೇಳೆ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶವನ್ನು ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.36 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕರ್ನಾಟಕ,ಕೇರಳ, ತಮಿಳುನಾಡು, ರಾಜಸ್ತಾನ, ಹರ್ಯಾಣ, ಬಿಹಾರ, ಅಸ್ಸಾಂನ ಜನತೆಯೊಂದಿಗೆ ಸಂವಾದ ನಡೆಸಿದರು.ಪೊಂಗಾಂಗ್ ಕೆರೆ ಮತ್ತು ಸುತ್ತಮುತ್ತಲ ಕೆರೆ ಮತ್ತು ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿರುವ ಇಂಡೊ-ಟಿಬೆಟಿಯನ್ ಗಡಿ ಭದ್ರತಾ ಸಿಬ್ಬಂದಿಯೊಂದಿಗೆ ಕೂಡ ಮಾತನಾಡಿ ಅಲ್ಲಿನ ಮಾಹಿತಿ ಪಡೆದರು. ಗುರುದ್ವಾರದ ಸಿಖ್ ಧಾರ್ಮಿಕ ಗುರುಗಳು ಮತ್ತು ಅಜ್ಮಿರ್ ಶರೀಫ್ ದರ್ಗಾದ ಮುಸ್ಲಿಂ ಮುಖಂಡರೊಂದಿಗೆ ಕೂಡ ಸಂವಾದ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ