ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್ ದೆಹಲಿಯ ಏಮ್ಸ್​ ಗೆ ದಾಖಲು

ನವದೆಹಲಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ಈ ನಡುವೆ ಗೋವಾದ ಪರ್ಯಾಯ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಹುಡುಕುತ್ತಿದೆ ಎಂದು ತಿಳಿದು ಬಂದಿದೆ.

18 ತಿಂಗಳಿಂದ ಪ್ಯಾಂಕ್ರಿಯಾಟಿಕ್​​ ಕಾಯಿಲೆಯಿಂದ ಬಳಲುತ್ತಿರುವ ಪರಿಕ್ಕರ್​ ಸೆಪ್ಟೆಂಬರ್​​ ಮೊದಲ ವಾರವಷ್ಟೆ ಅಮೆರಿಕದಿಂದ ಚಿಕಿತ್ಸೆ ಪಡೆದು ವಾಪಸಾಗಿದ್ದರು. ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್​ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪರಿಕ್ಕರ್​, ಸಿಎಂ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ​ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಸೋಮವಾರ ಗೋವಾಕ್ಕೆ ತಂಡವನ್ನು ಕಳುಹಿಸಿ ಮುಂದಿನ ಸಿಎಂ ಆಯ್ಕೆ ನಡೆಸಲಿದೆ ಎನ್ನಲಾಗಿದ್ದು, ಪರಿಕ್ಕರ್​​ ಸ್ಥಾನಕ್ಕೆ ರಾಮಕೃಷ್ಣ ಧಾವಾಲಿಕರ್​​ ಅವರನ್ನು ನೇಮಕ ಮಾಡಲು ಬಿಜೆಪಿ ರಾಷ್ಟ್ರ ನಾಯಕರು ಚಿಂತನೆ ನಡೆಸಿದ್ದಾರೆ.

ಗೋವಾದ ಕಾಂಡೊಲಿನ್​ ಆಸ್ಪತ್ರೆಯಲ್ಲಿ ಶುಕ್ರವಾರ ಸಚಿವ ಸಂಪುಟದ ಜತೆ ಪರಿಕ್ಕರ್​ ಈ ಕುರಿತು ಸಭೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ