ಬೆಂಗಳೂರು,ಸೆ.14-ಸೋಮವಾರದ ನಂತರ ಶುಭ ಸುದ್ದಿ ಕೊಡುವುದಾಗಿ ಹೇಳಿರುವ ಬಿ.ಎಸ್. ಯಡಿಯೂರಪ್ಪ ,ಅನ್ಯ ಪಕ್ಷದಿಂದ ಬರುವ ಶಾಸಕರ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಟ್ಟಿದ್ದಾರೆ.
ಒಟ್ಟು 13 ಶಾಸಕರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್, ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಸೇರಿದಂತೆ ಕೆಲವು ನಾಯಕರಿಗಾಗಿ ಮಾತ್ರ ನಿನ್ನೆಯೇ ಪಟ್ಟಿಯನ್ನು ನವದೆಹಲಿಗೆ ಕಳುಹಿಕೊಡಲಾಗಿದೆ.
ಯಾವ ಪಕ್ಷಗಳ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬುದನ್ನು ಕಾದು ನೋಡಿ. ಈ ಬಾರಿ ನಮ್ಮ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ. ಸೋಮವಾರದ ನಂತರ ನಿಮಗೆ ಸ್ಪಷ್ಟ ಚಿತ್ರಣ ನೀಡುತ್ತೇನೆ ಎಂದು ವರಿಷ್ಠರಿಗೆ ಬಿಎಸ್ವೈ ವಾಗ್ದಾನ ಮಾಡಿದ್ದಾರೆ.
ಹಿಂದೆ ಸರ್ಕಾರ ರಚನೆ ಮಾಡುವಾಗ ಕೆಲವು ಕಾರಣಗಳಿಂದ ಶಾಸಕರನ್ನು ಕರೆತರಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾದ ಬಳಿಕ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಈ ಸರ್ಕಾರ ನವೆಂಬರ್ ತನಕ ಮುಂದುವರೆಯುವುದಿಲ್ಲ.
ಈಗಾಗಲೇ ಶಾಸಕ ಶ್ರೀರಾಮುಲು ಸೇರಿದಂತೆ ಕೆಲವರು ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಷ್ಟು ಶಾಸಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂಬುದನ್ನು ಸೋಮವಾರದ ನಂತರ ತಿಳಿಸುತ್ತೇನೆ. ಈ ಬಾರಿ ನಾವು ಕಾರ್ಯಾಚರಣೆಯಲ್ಲಿ ವಿಫಲರಾಗುವುದಿಲ್ಲ. ಆದರೆ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನಿಮ್ಮ ಬೆಂಬಲ ಬೇಕೆಂದು ಕೋರಿದ್ದಾರೆ.
ದೋಸ್ತಿ ಸರ್ಕಾರ ಮುಂದುವರೆಯುವುದು ಅನೇಕ ಶಾಸಕರಿಗೆ ಇಷ್ಟವಿಲ್ಲ. ಈ ಹಿಂದೆ ಕೆಲವರು ಕಾರಣಾಂತರಗಳಿಂದ ಬಿಜೆಪಿಗೆ ಬರಲು ಹಿಂದೇಟು ಹಾಕಿದ್ದಾರೆ. ಈಗ ಅವರೇ ಸ್ವಯಂಪ್ರೇರಿತರಾಗಿ ಪಕ್ಷಕ್ಕೆ ಬರುವ ವಾಗ್ದಾನ ಮಾಡಿದ್ದಾರೆ. ಈ ಬಾರಿ ನಮ್ಮ ಪ್ರಯತ್ನ ಕೈ ತಪ್ಪುವುದಿಲ್ಲ. ಸೋಮವಾರದ ನಂತರ ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ. ಕಾನೂನು ಹೋರಾಟಕ್ಕೂ ನಿಮ್ಮ ಬೆಂಬಲ ಅಗತ್ಯ ಎಂದು ಯಡಿಯೂರಪ್ಪ ಹೇಳಿದ್ದಾರೆ.