ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನುಬೇಕೋ ಅದನ್ನು ಮಾಡುತ್ತಿದ್ದೇವೆ: ಸಿಎಂ

ಬೆಂಗಳೂರು, ಸೆ.14- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನುಬೇಕೋ ಅದನ್ನು ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮ್ಮನೆ ಕೂತಿಲ್ಲ. ಸರ್ಕಾರ ಬೀಳಿಸಲು ಯಾರು ಏನೇನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಬಿಜೆಪಿಯವರು ರೆಸಾರ್ಟ್ ಆದರೂ ಸಿದ್ದಪಡಿಸಲಿ, ಗುಡಿಸಲಾದರೂ ಸಿದ್ದಪಡಿಸಲಿ ಅದರ ಬಗ್ಗೆ ಚಿಂತೆ ಇಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ಸರ್ಕಾರ ಸುಭದ್ರಪಡಿಸಲು ಏನೇನು ತೀರ್ಮಾನ ಮಾಡಬೇಕೋ ಅದನ್ನು ಮಾಡುವುದಾಗಿ ಹೇಳಿದರು.

ಸರ್ಕಾರವನ್ನು ಬೀಳಿಸಲು ಯಾರು ಹಣ ಸಂಗ್ರಹ ಮಾಡುತ್ತಿದ್ದಾರೆ. ಅದರ ಹಿಂದೆ ಇರುವ ಕಿಂಗ್‍ಪಿನ್ ಯಾರು ? ಕಾನೂನು ರೀತಿ ಹೇಗೆ ಕ್ರಮ ಕೈಗೊಳ್ಳಬೇಕು, ಸರ್ಕಾರ ಬೀಳಿಸುವವರ ಹಿಂದೆ ಯಾರ್ಯಾರು ಇದ್ದಾರೆ ಎಂಬ ಮಾಹಿತಿ ಇದೆ. ಲಾಟರಿ, ಇಸ್ಪೀಟ್ ದಂಧೆ ನಡೆಸಿ ಕೋಟ್ಯಂತರ ಹಣ ಸಂಗ್ರಹಿಸಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ. ವ್ಯರ್ಥ ಕಸರತ್ತನ್ನು ನಡೆಸುತ್ತಿದ್ದಾರೆ. ಈಗಾಗಲೇ ಸಕಲೇಶಪುರದ ಪ್ಲಾಂಟರ್ ಒಬ್ಬರು ತಮ್ಮ ಮಗುವನ್ನೇ ಸಾಯಿಸಿ ಜೈಲಲ್ಲಿ ಇದ್ದಾರೆ. ಸರ್ಕಾರ ಬೀಳಿಸಲು ಗಣೇಶ ಹಬ್ಬದ ಗಡುವು ಮುಗಿಯಿತು. ಸೋಮವಾರದ ಗಡುವು ನೀಡಲಾಗಿದೆ. ನಂತರ ಅಕ್ಟೋಬರ್ 2, ತದನಂತರ ದಸರಾ ಉತ್ಸವ. ಆಗಲೂ ಪಂಚಾಂಗ ಸರಿಬರದಿದ್ದರೆ ಮುಂದೆ ಹೋಗಬಹುದು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಸರ್ಕಾರ ಮಾಡಿದ್ದ ಸಂದರ್ಭದಲ್ಲಿ ಆಗಿದ್ದ ಹಳೆಯ ಸ್ನೇಹಿತರು ನನ್ನ ಜತೆ ಇದ್ದಾರೆ. ಅವರ ಮೇಲೆ ಪ್ರೀತಿ, ವಿಶ್ವಾಸವಿದೆ. ಮಾಧ್ಯಮದವರು ಭಾವಿಸಿದಂತೆ ಮೈಸೂರು ಭಾಗದವರನ್ನು ತಾವು ಸಂಪರ್ಕಿಸಿಲ್ಲ. ನನ್ನ ಬಳಿ ಇರುವ ಶಾಸಕರ ಪಟ್ಟಿಯೇ ಬೇರೆ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲಾ ಸಚಿವರು ನಮ್ಮೊಂದಿಗೆ ಇದ್ದಾರೆ. ಆ ಪಕ್ಷದ ಆಂತರಿಕ ಭಿನ್ನಮತವನ್ನು ಅವರೇ ಸರಿಪಡಿಸಿಕೊಳ್ಳಬೇಕು. ಸರ್ಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಮುಂಗಡ ಪಾವತಿಯಷ್ಟೇ ಆಗುತ್ತಿದೆ. ಏನೇ ಪ್ರಯತ್ನ ಪಟ್ಟರೂ ಸಫಲವಾಗುವುದಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಚುರುಕು:
ಸೋಮವಾರದಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಗೊಂದಲದಿಂದ ಅಧಿಕಾರಿಗಳಿಗೆ ಅಸಡ್ಡೆ ಉಂಟಾಗಿರಬಹುದು. ಅವರಿಗೆ ಚಾಟಿ ಬೀಸದಿದ್ದರೆ ಅವರು ಚುರುಕುಗಾಗುವುದಿಲ್ಲ. ಇದರಿಂದ ಸೋಮವಾರ ಅಧಿಕಾರಿಗಳ ಸಭೆ ಕರೆದು ಸರ್ಕಾರವನ್ನು ಮತ್ತಷ್ಟು ಸುಸೂತ್ರವಾಗಿ ನಡೆಸಲು ತೀರ್ಮಾನಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ