ಜೈಷ್​ ಎ ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಮನೆಯೊಂದರಲ್ಲಿ ಅಡಗಿಕುಳಿತಿದ್ದ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಭಾರತೀಯ ಸೇನೆ, ಸಿಆರ್​ಪಿಎಫ್​ ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಚಕಮಕಿಯಲ್ಲಿ 8 ಯೋಧರು ಗಾಯಗೊಂಡಿದ್ದಾರೆ.

ರಿಯಾಸಿ ಜಿಲ್ಲೆಯ ಕಕರಿಯಾಲ್​ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ನಡೆಸಿದ್ದವು. ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದಾಗಿ ಡಿಎಸ್​ಪಿ ಮೋಹನ್​ ಲಾಲ್​ ಸೇರಿದಂತೆ ಐವರು ಸಿಆರ್​ಪಿಎಫ್​ ಯೋಧರು ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಹತ್ಯೆಯಾದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನಷ್ಟು ಉಗ್ರರು ಅಡಗಿರುವ ಶಂಕೆ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ