ಬೆಂಗಳೂರು,ಸೆ.12- ಎರಡು ಮೂರು ದಿನ ಎಲ್ಲ ಶಾಸಕರು ಕಾಯಿರಿ. ಚೌತಿ ಹಬ್ಬ ಮುಗಿದ ಬಳಿಕ ಶುಭ ಸುದ್ದಿ ಸಿಗಲಿದೆ. ಯಾರೊಬ್ಬರು ಆತುರ ಪಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ ಅವರು, ಚೌತಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿಗೆ ಶುಭ ಸುದ್ದಿ ಸಿಗಲಿದೆ. ಹೆಚ್ಚೆಂದರೆ ಎರಡು ಮೂರು ದಿನ ಮಾತ್ರ ಕಾದರೆ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಬೇರೆ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ ಎಂದು ಸಲಹೆ ಮಾಡಿದರು.
ಸರ್ಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್-ಜೆಡಿಎಸ್‍ನವರು ನಿಮಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಬಹುದು. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಇನ್ನು ಒಂದು ತಿಂಗಳು ಇರುವುದಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದು. ಎಚ್ಚರಿಕೆಯಿಂದ ಪ್ರತಿಯೊಬ್ಬರು ಇರಬೇಕೆಂದು ಸೂಚಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಅನೇಕ ಶಾಸಕರಿಗೆ ಸರ್ಕಾರ ಮುಂದುವರೆಯಲು ಇಷ್ಟವಿಲ್ಲ. ಪ್ರತಿಯೊಂದು ವಿಷಯದಲ್ಲೂ ಕೆಲವರು ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ಅನೇಕರು ಅಸಮಾಧಾನಗೊಂಡಿದ್ದಾರೆ.