ಬೆಂಗಳೂರು, ಸೆ.11- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ದುಸ್ಸಾಹಸಕ್ಕೆ ಕೇಂದ್ರ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಒಂದು ಚುನಾಯಿತ ಸರ್ಕಾರವನ್ನು ಯಾವುದೇ ಆರೋಪವಿಲ್ಲದೆ ಏಕಾಏಕಿ ಶಾಸಕರನ್ನು ಸೆಳೆದುಕೊಂಡು ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿದರೆ ಮುಂಬರುವ 2019 ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದೆಂಬ ಭೀತಿ ವರಿಷ್ಠರನ್ನು ಕಾಡುತ್ತಿದೆ.
ಈ ಹಿಂದೆ ವಿಧಾನಸಭೆ ಚುನಾವಣೆ ಮುಗಿದಾಗ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದಿದ್ದರೂ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ್ದೇ ದೊಡ್ಡ ವಿವಾದವಾಗಿತ್ತು.
ಕೊನೆಗೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿದ್ದರಿಂದ ಕೇವಲ 24 ಗಂಟೆಯಲ್ಲೇ ಬಹುಮತ ಸಾಬೀತು ಪಡಿಸುವ ಇಕ್ಕಟ್ಟಿಗೆ ಸಿಲುಕಿ ಸರ್ಕಾರ ಪತನವಾಗಿದ್ದಲ್ಲದೆ, ಬಿಜೆಪಿ ವರ್ಚಸ್ಸು ಕೂಡ ರಾಷ್ಟ್ರಮಟ್ಟದಲ್ಲಿ ಮೂರಾಬಟ್ಟೆಯಾಗಿತ್ತು.
ಈಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಸರ್ಕಾರ ರಚನೆ ಮಾಡಿದರೆ ಪ್ರತಿಪಕ್ಷಗಳು ಆಪರೇಷನ್ ಕಮಲವನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ವಿರುದ್ಧ ತಿರುಗಿ ಬಿದ್ದರೆ ಗತಿ ಏನು ಎಂಬ ಪ್ರಶ್ನೆ ಎದುರಾಗಿದೆ.
ಈಗಾಗಲೇ ಡಾಲರ್ ಎದುರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿರುವುದು, ಬ್ಯಾರಲ್ ಬೆಲೆ ಇಳಿಕೆಯಾಗಿದ್ದರೂ ಡೀಸೆಲ್, ಪೆಟ್ರೋಲ್ ಬೆಲೆ ಪದೇ ಪದೇ ಏರಿಕೆಯಾಗುತ್ತಿರುವುದರಿಂದ ಜನ ಸಾಮಾನ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‍ಡಿಎ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಇದ್ದಕ್ಕಿದ್ದಂತೆ ಅಸ್ಥಿರಗೊಳಿಸಿದರೆ ಪಕ್ಷದ ವರ್ಚಸ್ಸು ಕುಂದುವುದಲ್ಲದೆ, ಮೋದಿ ನಾಯಕತ್ವಕ್ಕೆ ಹೊಡೆತ ಬೀಳಬಹುದೆಂಬ ಅಳುಕು ರಾಷ್ಟ್ರೀಯ ನಾಯಕರದ್ದು.
ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಶಾಸಕರು ಅತೃಪ್ತಗೊಂಡು ಸ್ವಯಂಪ್ರೇರಿತರಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರೂ ಪ್ರತಿಪಕ್ಷಗಳು ಇದನ್ನು ಆಪರೇಷನ್ ಕಮಲ ಎಂದೇ ಬಿಂಬಿಸುತ್ತವೆ. ಇದನ್ನು ಸಮರ್ಥಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಕರ್ನಾಟಕದಲ್ಲಿರುವ 28 ಲೋಕಸಭೆ ಕ್ಷೇತ್ರಕ್ಕಾಗಿ ಇಡೀ ದೇಶವನ್ನೇ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಪ್ರತಿಪಕ್ಷಗಳು ಎಷ್ಟೇ ಆರೋಪಿಸಿದರೂ ಮೋದಿ ವರ್ಚಸ್ಸು ಈಗಲೂ ಕುಂದಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರುವ ಲಕ್ಷಣಗಳು ಸ್ಪಷ್ಟವಾಗಿವೆ. ಈಗ ಇಲ್ಲದ ಉಸಾಬರಿ ಮಾಡಿಕೊಂಡರೆ ಪ್ರತಿಪಕ್ಷಗಳ ಕೈಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ ಎಂದು ಕೇಂದ್ರ ನಾಯಕರು ಬಿಎಸ್‍ವೈಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಅನುಮತಿ ನೀಡದ ವರಿಷ್ಠರು:
ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ತುದಿಗಾಲಲ್ಲಿ ನಿಂತಿದ್ದರೂ ಕೇಂದ್ರ ನಾಯಕರು ಮಾತ್ರ ಸುತಾರಾಮ್ ಒಪ್ಪುತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಪರಿಸ್ಥಿತಿ ಮಾರಕವಾಗಿಲ್ಲ.
ಮೋದಿಗೆ ಜನಪ್ರಿಯತೆ ಇರುವುದರಿಂದ ರಾಜ್ಯದಲ್ಲಿ ನಾವು ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಗೆಲ್ಲಲು ಸಾಧ್ಯವಾಯಿತು. 28 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 12ರಿಂದ 14 ಸ್ಥಾನಗಳನ್ನು ಗೆದ್ದೆ ಗೆಲ್ಲಬಹುದು.
ಒಂದು ವೇಳೆ ನೀವು ಸರ್ಕಾರ ರಚನೆ ಮಾಡಿದರೂ ಅಬ್ಬಬ್ಬ ಎಂದರೆ 20 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯ. ಏನೇ ಸರ್ಕಸ್ ನಡೆಸಿದರೂ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಗೆಲುವು ಅಷ್ಟು ಸುಲಭವಲ್ಲ. ಆರೇಳು ಲೋಕಸಭೆ ಕ್ಷೇತ್ರಗಳಿಗಾಗಿ ಪಕ್ಷದ ಮರ್ಯಾದೆಯನ್ನು ಹಾಳುಮಾಡಬೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಹೀಗಾಗಿ ಯಡಿಯೂರಪ್ಪ ಏನೇ ವಾದ ಮಂಡಿಸಿದರೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ.
ಬಿಎಸ್‍ವೈ ಹೇಳುವುದೇನು:
ಇನ್ನು ಯಡಿಯೂರಪ್ಪ ವರಿಷ್ಠರ ಮುಂದೆ ತಮ್ಮದೇ ಆದ ವಾದವನ್ನು ಮಂಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಈಗ ಪರಿಸ್ಥಿತಿ ಪೂರಕವಾಗಿದೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆ, ಅಧಿಕಾರಿಗಳ ವರ್ಗಾವರ್ಗಿ, ಕೆಲವು ಪ್ರಮುಖ ತೀರ್ಮಾನಗಳಲ್ಲಿ ಕಡೆಗಣಿಸುತ್ತಿರುವುದು, ಸರ್ಕಾರದ ಪ್ರತಿಯೊಂದು ವಿಷಯದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ರೇವಣ್ಣ ಮೂಗು ತೂರಿಸುತ್ತಿರುವುದಕ್ಕೆ ಬೆಳಗಾವಿಯ ಜಾರಕಿಹೊಳಿ ಸಹೋದರರು ಅಸಮಾಧಾನಗೊಂಡಿದ್ದಾರೆ.
ಕೆಲವೇ ಕೆಲವು ಬೆರಳೆಣಿಕೆಯ ಶಾಸಕರನ್ನು ಹೊರತುಪಡಿಸಿದರೆ ಯಾರಿಗೂ ಸರ್ಕಾರ ಮುಂದುವರೆಯುವುದು ಇಷ್ಟವಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಿ ಪ್ರವಾಸದಲ್ಲಿದ್ದಾರೆ.
ಇಂತಹ ಸಮಯ ಬಿಟ್ಟರೆ ಮುಂದೆ ಅವಕಾಶ ಸಿಗುವುದಿಲ್ಲ. 14 ಶಾಸಕರು ಪಕ್ಷಕ್ಕೆ ಬರಲು ಸಿದ್ದರಿರುವಾಗ ನೀವು ಆತಂಕ ಪಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬಂದು ಶಾಸಕರ ಜತೆ ಮಾತುಕತೆ ನಡೆಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ.
ರಾಜ್ಯದಲ್ಲಿ 20 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕಾದರೆ ನಾವು ಸರ್ಕಾರ ರಚನೆ ಮಾಡಲೇಬೇಕು. ಇಲ್ಲದಿದ್ದರೆ ಈ ಗುರಿಯನ್ನು ತಲುಪಲು ಸಾಧ್ಯವೇ ಇಲ್ಲ. ಲೋಕಸಭೆ ಚುನಾವಣೆವರೆಗೂ ಕಾಯುತ್ತಾ ಕುಳಿತರೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತವೆ. ಸರ್ಕಾರ ರಚನೆಗೆ ಈಗ ಸಮಯ ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.