ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿ ಮೂಗು ತೂರಿಸುವುದನ್ನು ನಿಲ್ಲಿಸದೇ ಇದ್ದರೆ ಸಮ್ಮಿಶ್ರ ಸರ್ಕಾರ ಪತನಕ್ಕೆ ನಾವೇ ಮುಹೂರ್ತ ಫಿಕ್ಸ್ ಮಾಡಬೇಕಾಗುತ್ತದೆ: ಸಚಿವ ಜಾರಕಿ ಹೊಳಿ ಎಚ್ಚರಿಕೆ

ಬೆಂಗಳೂರು, ಸೆ.11- ಬೆಳಗಾವಿ ಜಿಲ್ಲಾರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸುವುದನ್ನು ನಿಲ್ಲಿಸದೇ ಇದ್ದರೆ ಸಮ್ಮಿಶ್ರ ಸರ್ಕಾರ ಪತನಕ್ಕೆ ನಾವೇ ಮುಹೂರ್ತ ಫಿಕ್ಸ್ ಮಾಡಬೇಕಾಗುತ್ತದೆ ಎಂದು ಸಚಿವ ರಮೇಶ್ ಜಾರಕಿ ಹೊಳಿ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಪರಮೇಶ್ವರ್ ಅವರ ಮನೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ, ರಾಜಕಾರಣದಲ್ಲಿ ನಮಗೂ ತಾಕ್ಕತ್ತಿದೆ. ಅದನ್ನು ಪ್ರದರ್ಶನ ಮಾಡಲು ಅವಕಾಶ ನೀಡಬೇಡಿ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿರುವ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣಕ್ಕೆ ಮುಖಭಂಗವಾದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ರಮೇಶ್ ಜಾರಕಿಹೊಳಿ ಈಗಾಗಲೇ ನಮಗಾಗಿರುವ ಅವಮಾನವನ್ನು ಪಕ್ಷದ ವರಿಷ್ಠರೇ ಸರಿಪಡಿಸಬೇಕು, ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ರಾಜ್ಯ ಮಹಿಳಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕು, ಮುಂದಿನ ದಿನಗಳಲ್ಲಿ ಹೆಬ್ಬಾಳ್ಕರ್ ಬಣಕ್ಕೆ ಯಾವುದೇ ಸ್ಥಾನಮಾನ ನೀಡಬಾರದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ತಾವು ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು, ಸಚಿವ ಸಂಪುಟ ವಿಸ್ತರಣೆಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು, ಪ್ರಮುಖವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಬೆಂಗಳೂರಿನ ಯಾವ ನಾಯಕರೂ ಬೆಳಗಾವಿಯ ಯಾವುದೇ ರಾಜಕಾರಣದಲ್ಲೂ ಮೂಗು ತೂರಿಸಬಾರದು ಎಂಬ ಷರತ್ತುಗಳನ್ನು ಮುಂದಿಟ್ಟದ್ದಾರೆ ಎನ್ನಲಾಗಿದೆ.

ನಾವು ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿದ್ದೇವೆ. ಪಕ್ಷ ಬದಲಾವಣೆಯ ಚಿಂತನೆ ನಮ್ಮ ಮುಂದಿಲ್ಲ. ಆದರೆ, ಕಾಂಗ್ರೆಸ್‍ನಲ್ಲಿ ನಮ್ಮನ್ನು ಮೂಲೆಗುಂಪು ಮಾಡುವುದಾದರೆ ನಾವೇಕೆ ಪಕ್ಷ ಸಂಘಟಿಸಬೇಕು ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ತಮ್ಮ ಸಹೋದರ ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿಯೇ ಮೂಲೆ ಗುಂಪು ಮಾಡಿದೆ. ನಾವೇ ಬೆಳೆಸಿದ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ನಮ್ಮ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ನಿಮ್ಮಿಂದ ನಮಗೆ ಸ್ಪಷ್ಟ ಭರವಸೆ ಸಿಕ್ಕರೆ ಮಾತ್ರ ಮೌನವಾಗಿರುತ್ತೇವೆ. ಇಲ್ಲವಾದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಅದರಿಂದಾಗಿ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮವಾದರೂ ನಾವು ಹೊಣೆಗಾರರಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಹಂತದಲ್ಲಿ ರಮೇಶ್ ಜಾರಕಿಹೊಳಿ ತಾಳ್ಮೆ ಕಳೆದುಕೊಂಡು ಕೂಗಾಡಿದ್ದಾರೆ ಎಂಬ ಮಾಹಿತಿ ಇದೆ. ಪರಮೇಶ್ವರ್ ಹಾಗೂ ದಿನೇಶ್‍ಗುಂಡೂರಾವ್ ಅವರು ರಮೇಶ್ ಅವರನ್ನು ಸಮಾಧಾನ ಪಡಿಸಲು ಮುಂದಾದರಾದರೂ ಸ್ಪಷ್ಟ ಭರವಸೆ ನೀಡದ ಹೊರತು ಕಾಟಾಚಾರದ ಸಮಾಧಾನದ ಮಾತುಗಳು ಬೇಕಿಲ್ಲ. ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಸಚಿವ ಡಿ.ಕೆ.ಶಿವಕುಮಾರ್ ಅವರನ್ನೇ ಗುರಿಯಾಗಿಟ್ಟುಕೊಂಡು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದು, ಅವರನ್ನು ಸಮಾಧಾನಪಡಿಸಲು ಪರಮೇಶ್ವರ್ ಮತ್ತು ದಿನೇಶ್‍ಗುಂಡೂರಾವ್ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.

ಆದರೆ, ಯಾವುದೇ ಸ್ಪಷ್ಟತೆ ಹೊರ ಬಿದ್ದಿಲ್ಲ. ಹೈಕಮಾಂಡ್ ಗಮನಕ್ಕೆ ಎಲ್ಲಾ ಬೆಳವಣಿಗೆಗಳನ್ನು ತಂದು ನಿಮಗೆ ನ್ಯಾಯ ಕೊಡಿಸುವುದಾಗಿ ಇಬ್ಬರು ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದಷ್ಟು ಶೀಘ್ರವಾಗಿ ರಾಹುಲ್‍ಗಾಂಧಿ ಮತ್ತು ವೇಣುಗೋಪಾಲ್ ಅವರ ಜತೆ ಚರ್ಚಿಸಲು ಸಮಯ ನಿಗದಿಪಡಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ