ಬೆಂಗಳೂರು, ಸೆ.8- ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಾತಿನಿಧ್ಯ ನೀಡಬೇಕೆಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸೋಮಶೇಖರ ಮಹದೇವಪ್ಪ ಕೊತ್ತುಂಬರಿ ಮಾತನಾಡಿ, ನಮ್ಮ ಸಮಿತಿಯ ಹೋರಾಟಕ್ಕೆ ಸ್ಪಂದಿಸಿ ಕರ್ನಾಟಕ ರಾಜ್ಯ ಸರ್ಕಾರ ಒಂಬತ್ತು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಅದರಂತೆ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಕೃಷ್ಣ ಜಲಭಾಗ್ಯ ಅಭಿವೃದ್ಧಿ ನಿಗಮದ ಕಚೇರಿ ಹಾಗೂ ನೋಂದಾಯಿತ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸಬೇಕು. ಸಮಗ್ರ ನೀರಾವರಿ ಪದ್ಧತಿ, ಆಧುನಿಕ ಕೃಷಿ ಪದ್ಧತಿ, ಉದ್ಯೋಗ ಆಧರಿತ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕೈಗಾರಿಕೆಗಳು,ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಚರ್ಚಿಸಲು ತಕ್ಷಣವೇ ಮುಖ್ಯಮಂತ್ರಿಗಳು ಬೆಳಗಾವಿ ಸುವರ್ಣ ಸೌಧದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಮುಖಂಡರು , ಹೋರಾಟಗಾರರು, ಸಂಘ-ಸಂಸ್ಥೆಗಳ ಪ್ರಮುಖರ ಸಭೆಯನ್ನು ಕರೇಯಬೇಕೆಂದು ಆಗ್ರಹಿಸಿದರು.
ಒಂದು ವೇಳೆ ನಿರ್ಲಕ್ಷಿಸಿದರೆ ಹೋರಾಟ ಮಾಡಲಾಗುವುದು ಎಂದು ಸೋಮಶೇಖರ ಮಹದೇವಪ್ಪ ಕೊತ್ತಂಬರಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬರವರಾಜ ದಿಂಡೋರ್ ಉಪಸ್ಥಿತರಿದ್ದರು.