ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ವಿತರಿಸುವ ಟಿಕೆಟ್‍ನಲ್ಲಿ ಭಾರಿ ಗೋಲ್‍ಮಾಲ್

 

ಬೆಂಗಳೂರು, ಸೆ.8-ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ವಿತರಿಸುವ ಟಿಕೆಟ್‍ನಲ್ಲಿ ಭಾರಿ ಗೋಲ್‍ಮಾಲ್ ನಡೆದಿರುವುದು ಬೆಳಕಿಗೆ ಬಂದಿದ್ದು, ದೇವಿಯ ಸಮ್ಮುಖದಲ್ಲೇ ನಡೆದ ಈ ಅವ್ಯವಹಾರದಿಂದ ಭಕ್ತ ಸಮೂಹ ತೀವ್ರ ಆಕ್ರೋಶಗೊಂಡಿದೆ.
ತಾಯಿ ಚಾಮುಂಡಿ ದೇವಿಯ ವಿಶೇಷ ದರ್ಶನ ಪಡೆಯಲು ಭಕ್ತರಿಗೆ ಟಿಕೆಟ್‍ಗಳನ್ನು ವಿತರಿಸಲಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ 30ರಿಂದ 40 ರೂ. ಬೆಲೆಯ ಟಿಕೆಟ್ ವಿತರಿಸಿದರೆ ವರ್ಧಂತಿ, ಆಷಾಢ ಮಾಸ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಇವುಗಳ ಬೆಲೆ 100 ರೂ.ವರೆಗೂ ಹೆಚ್ಚಾಗುತ್ತದೆ. ದೇವಿಯ ದರ್ಶನಕ್ಕೆ ಬರುವ ಭಕ್ತರು ಟಿಕೆಟ್ ಪಡೆಯುವಾಗ ದೇವಸ್ಥಾನದ ಅಭಿವೃದ್ಧಿಗೆ ಎಂದು ಮುಕ್ತ ಮನಸ್ಸಿನಿಂದಲೇ ಹಣ ನೀಡಿ ಟಿಕೆಟ್ ಪಡೆಯುತ್ತಾರೆ. ಆದರೆ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿ ದೇವರ ಹೆಸರಿನಲ್ಲಿ ಪಡೆದ ಹಣವನ್ನು ತಮ್ಮ ಜೇಬಿಗೆ ಹಾಕುತ್ತಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಈ ಅವ್ಯವಹಾರಕ್ಕೆ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಕೈಜೋಡಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಪ್ಯೂಟರೀಕೃತ ಟಿಕೆಟ್ ನೀಡುವಾಗ ಅದರಲ್ಲಿ ನಮೂದಾಗುವ ಇಸವಿಯನ್ನು ಬದಲಾಯಿಸುವ ಮೂಲಕ ಭಕ್ತರಿಗೆ ವಂಚಿಸಲಾಗುತ್ತಿದೆ. ಟಿಕೆಟ್‍ನಲ್ಲಿ 2017 ಎಂದು ನಮೂದಾಗಿರುವ ಸ್ಥಳದಲ್ಲಿ 2007 ಎಂದು ಬದಲಾಯಿಸಿ ವಿತರಿಸುತ್ತಿರುವುದು ಕಂಡುಬಂದಿದೆ. ಮೂಲ ಟಿಕೆಟ್ ಮಾದರಿಯಲ್ಲೆ ನಕಲಿ ಟಿಕೆಟ್ ತಯಾರಿಸಿ ಅವುಗಳನ್ನು ಭಕ್ತರಿಗೆ ನೀಡಿ ಹಣ ಪಡೆಯಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ವಿತರಿಸುವ ಈ ಟಿಕೆಟ್ ಪಡೆದ ಭಕ್ತರು ದರ್ಶನ ಪಡೆದ ಬಳಿಕ ಪ್ರಸಾದ ವಿತರಿಸುವ ಕೌಂಟರ್‍ನಲ್ಲಿ ನೀಡಿದರೆ ಪ್ರಸಾದ ನೀಡಲಾಗುತ್ತದೆ. ಈ ಟಿಕೆಟ್ ಮತ್ತೆ ಸಿಬ್ಬಂದಿಯ ಕೈಗೆ ಸೇರುತ್ತಿರುವುದರಿಂದ ದೇವಸ್ಥಾನಕ್ಕೆ ಸೇರಬೇಕಾಗಿದ್ದ ಹಣ ಸಿಬ್ಬಂದಿಯ ಕೈಗೆ ಸೇರುತ್ತದೆ. ಮಾತ್ರವಲ್ಲ ಎಷ್ಟು ಮಂದಿ ದೇವರ ದರ್ಶನ ಪಡೆದಿದ್ದಾರೆ ಎಂಬ ಮಾಹಿತಿಯೂ ಸರ್ಕಾರಕ್ಕೆ ಲಭ್ಯವಾಗುತ್ತಿಲ್ಲ. ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಅವ್ಯವಹಾರಕ್ಕೆ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಬೆಂಗಾವಲಾಗಿ ನಿಂತಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಈ ಟಿಕೆಟ್ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹಲವು ಭಕ್ತರು ದಾಖಲೆ ಸಮೇತ ತಿಳಿಸಿದ್ದಾರೆ.

ಇತ್ತೀಚೆಗೆ ಭಕ್ತರೊಬ್ಬರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೋಗಿದ್ದು, ಅವರಿಗೆ ನಕಲಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಅನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸಿದಾಗ 2008 ಎಂದು ನಮೂದಿಸಲಾಗಿತ್ತು. ಇದನ್ನು ಅಲ್ಲಿನ ಸಿಬ್ಬಂದಿಯ ಗಮನಕ್ಕೆ ತಂದಾಗ ಅವರು ಈ ವ್ಯಕ್ತಿಯನ್ನು ಅಲ್ಲಿಂದ ಸಾಗಹಾಕಿ, ಅವ್ಯವಹಾರ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮೂಲಕ ಇಲಾಖೆಯ ಮೇಲಾಧಿಖಾರಿಯೇ ಇದರ ನೇತೃತ್ವವಹಿಸಿರುವ ಬಗ್ಗೆ ಅನುಮಾನ ಮೂಡುತ್ತಿದೆ.

ಚಾಮುಂಡೇಶ್ವರಿ ಸನ್ನಿದಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು. ಮೇಯಲು ಸೂಕ್ತ ಸ್ಥಳ ಎಂದು ತಿಳಿದುಕೊಂಡಿರುವ ಅವರು, ಎಷ್ಟು ಗಳಿಸಲು ಸಾಧ್ಯವಾಗುತ್ತದೋ ಅಷ್ಟು ದೋಚಲು ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಇಂತಹ ಅವ್ಯವಹಾರ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಜೇಬಿಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಸಿಬ್ಬಂದಿ ಹೆಸರಿಗೆ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಇತರ ಕಡೆಗಳಲ್ಲಿ ಅಂಗಡಿ ಇಟ್ಟುಕೊಂಡು ಬೇರೆ ಬೇರೆ ವ್ಯಾಪಾರದಲ್ಲಿ ತೊಡಗಿರುವುದು ಕೂಡ ಪತ್ತೆಯಾಗಿದೆ. ದೇವಸ್ಥಾನದ ಗುತ್ತಿಗೆ ಆಧಾರದ ಸಿಬ್ಬಂದಿ ಐಷಾರಾಮಿ ಕಾರು, ಮನೆಗಳನ್ನು ಹೊಂದಿರುವುದು ಈ ಆರೋಪಕ್ಕೆ ಪುಷ್ಟಿನೀಡುವಂತಿದೆ.

ಚಾಮುಂಡೇಶ್ವರಿ ದೇವಸ್ಥಾನದ ನಿರ್ವಹಣೆಯ ಹೊಣೆ ಹೊತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆಸಿ ಕೆಲಸದಿಂದ ವಜಾಗೊಂಡವರು. ಆದರೆ ತನ್ನ ರಾಜಕೀಯ ಪ್ರಭಾವ ಬಳಸಿ ಮತ್ತೆ ಸರ್ಕಾರಿ ಕೆಲಸಕ್ಕೆ ವಕ್ಕರಿಸಿದ್ದು ಗುಟ್ಟಾಗಿ ಉಳಿದಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿದ್ದ ಹುದ್ದೆಗಿಂತ ಕೆಳ ಹಂತದ ಹುದ್ದೆ ಮುಜರಾಯಿ ಇಲಾಖೆಯಲ್ಲಿ ಸಿಕ್ಕಿದ್ದರೂ ನಿಶ್ಚಿಂತೆಯಿಂದ ಚಾಮುಂಡೇಶ್ವರಿ ಸಮ್ಮುಖದಲ್ಲಿ ಮೇಯುತ್ತಿರುವುದು ಸರ್ಕಾರದ ಗಮನಕ್ಕೆ ಬಾರದಿರುವುದು ಮಾತ್ರ ದುರದೃಷ್ಟಕರ.
ಇನ್ನಾದರೂ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವರು, ಚಾಮುಂಡೇಶ್ವರಿ ಸಮ್ಮುಖದಲ್ಲಿ ನಡೆಯುತ್ತಿರುವ ಟಿಕೆಟ್ ಗೋಲ್‍ಮಾಲ್‍ಗೆ ಇತಿಶ್ರೀ ಹಾಡಿ ಭಕ್ತರ ಹಣ ದೇವರಿಗೆ ಸೇರುವಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂಬುದು ದೇವಿಯ ಭಕ್ತರ ಆಶಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ