ಮುಂಬೈ: ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ಇದೇ ಮೊದಲ ಬಾರಿಗೆ 72.11 ರುಪಾಯಿಗೆ ತಲುಪಿದೆ.
ಆಗಸ್ಟ್ 31ರಂದು ಡಾಲರ್ ಎದುರು ರುಪಾಯಿ ಮೌಲ್ಯ 71 ರುಪಾಯಿಗೆ ಇಳಿಕೆಯಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಈಗ ಮತ್ತೊಂದು ದಾಖಲೆ ನಿರ್ಮಿಸಿದ್ದು, ಮತ್ತಷ್ಟು ಇಳಿಕೆಯಾಗಿದೆ. ನಿನ್ನೆ ಮುಂಬೈ ಷೇರು ಮಾರುಕಟ್ಟೆ ಮುಕ್ತಾಯದ ವೇಳೆ 71.75ಕ್ಕಿಳಿದಿದ್ದ ರುಪಾಯಿ ಮೌಲ್ಯ ಇಂದು 36 ಪೈಸೆಯಷ್ಟು ಇಳಿಕೆಯಾಗುವ ಮೂಲಕ 72.11 ರುಪಾಯಿಗೆ ತಲುಪಿದೆ.
ಭಾರತೀಯ ಕರೆನ್ಸಿಯ ಮೌಲ್ಯ ಇದೇ ತಿಂಗಳಲ್ಲಿ ಶೇ.2ರಷ್ಟು ಕುಸಿದಿದ್ದು, ಈ ವರ್ಷದಲ್ಲಿಶೇ.12ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಇದು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಬ್ಯಾಂಕ್ ಮತ್ತು ಆಮದುದಾರರಿಂದ ಡಾಲರ್ಗೆ ಭಾರಿ ಡಿಮಾಂಡ್ ಸೃಷ್ಟಿಯಾಗಿದ್ದು, ಅತ್ಯಂತ ಶೀಘ್ರದಲ್ಲೇ ರುಪಾಯಿ ಮೌಲ್ಯ 73 ತಲುಪಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರುಪಾಯಿ ಕುಸಿತಕ್ಕೆ ಜಾಗತಿಕ ಅಂಶಗಳು ಕಾರಣವಾಗಿದ್ದು, ಇತರ ಕರೆನ್ಸಿಗಳಿಗೆ ಹೋಲಿಸಿದರೆ ದೇಶೀಯ ಘಟಕವು ಉತ್ತಮವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.