ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು: ಉಪಮುಖ್ಯಮಂತ್ರಿ

ಬೆಂಗಳೂರು, ಸೆ.4- ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿಂತಲೂ ಕಾಂಗ್ರೆಸ್‍ಗೆ ಹೆಚ್ಚಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಗರ ಪ್ರದಕ್ಷಿಣೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಯರ್ ಚುನಾವಣೆಗೆ ನಿನ್ನೆಯಷ್ಟೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಶಾಸಕರು, ಬಿಬಿಎಂಪಿ ಸದಸ್ಯರೊಂದಿಗೆ ಚರ್ಚಿಸಿ ನೂತನ ಮೇಯರ್ ಅವರನ್ನು ಆಯ್ಕೆ ಮಾಡಲಾಗುವುದು. ಮಿತ್ರ ಪಕ್ಷವಾದ ಜೆಡಿಎಸ್ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಬೇಡಿಕೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಇನ್ನೂ ಚರ್ಚೆಗಳು ಆರಂಭವಾಗಿಲ್ಲ. ಇನ್ನು ಮೇಲೆ ಎಲ್ಲರ ಜೊತೆ ಸಮಾಲೋಚನೆ ಮಾಡುತ್ತೇವೆ ಎಂದು ಹೇಳಿದರು.

ನಮಗೆ ಮೇಯರ್ ಅನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಸಂಖ್ಯಾಬಲವಿದೆ. ಹೀಗಾಗಿ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯರ ಮೂಲ ವಿಳಾಸದಲ್ಲೇ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಮೊದಲು ಬೆಂಗಳೂರಿನಲ್ಲಿದ್ದ ವಿಧಾನಪರಿಷತ್ ಸದಸ್ಯರು ಹೆಸರನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಗೆಲುವಿಗೆ ಅಗತ್ಯವಾದ ಬಿಬಿಎಂಪಿ ಸದಸ್ಯರೇ ನಮ್ಮ ಬಳಿ ಇರುವುದರಿಂದ ವಿಧಾನಪರಿಷತ್ ಸದಸ್ಯರ ಮತಗಳು ಅಗತ್ಯವಿಲ್ಲ ಎಂದರು.
ತಮ್ಮ ಬಟ್ಟೆ ಮೇಲೆ ಬಿದ್ದ ಗಲೀಜನ್ನು ಗನ್‍ಮ್ಯಾನ್ ನೀರು ಹಾಕಿ ಸ್ವಚ್ಛಗೊಳಿಸಿರುವುದನ್ನು ಮಾಧ್ಯಮಗಳು ಅಂತಾರಾಷ್ಟ್ರೀಯ ಸುದ್ದಿ ಮಾಡುತ್ತಿರುವುದು ವಿಷಾದನೀಯ. ನಿಮ್ಮ ಪ್ರೀತಿಗೆ ಧನ್ಯವಾದ ಎಂದು ವ್ಯಂಗ್ಯವಾಗಿ ಹೇಳಿದರು.

ಪೆಟ್ರೋಲ್-ಡೀಸಲ್ ಬೆಲೆ ಏರಿಕೆ ವಿರುದ್ಧವಾಗಿ ಕೆಪಿಸಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.
ಮೋದಿ ಆಡಳಿತದಲ್ಲಿ 16 ಬಾರಿ ಪೆಟ್ರೋಲ್-ಡೀಸಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ಬ್ಯಾರೆಲ್‍ಗೆ 132 ಡಾಲರ್ ದರ ಇದ್ದಾಗಿನ ಪೆಟ್ರೋಲ್-ಡೀಸಲ್ ಬೆಲೆಯೇ ಬ್ಯಾರೆಲ್‍ಗೆ 32 ಡಾಲರ್ ಆದಾಗಲೂ ಮುಂದುವರೆದಿದೆ. ಕಚ್ಚಾತೈಲ ಬೆಲೆ ಇಳಿಕೆಯ ಲಾಭ ಗ್ರಾಹಕರಿಗಾಗಿಲ್ಲ. ಜನಸಾಮಾನ್ಯರು, ರೈತರು, ಕೃಷಿ ಕಾರ್ಮಿಕರು ಎಲ್ಲರೂ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದನ್ನು ವಿರೋಧಿಸಿ ಸೆ.14 ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.
ಬೆಳಗ್ಗೆಯಿಂದ ತಮ್ಮ ನಗರ ಸಂಚಾರದಲ್ಲಿ ಕಂಡ ಅನುಭವಗಳನ್ನು ಇದೇ ಸಂದರ್ಭದಲ್ಲಿ ಪರಮೇಶ್ವರ್ ವಿವರಿಸಿದರು. ಮುಂದಿನ ದಿನಗಳಲ್ಲಿ ಬೆಂಗಳೂರಿನ 28 ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅರ್ಧ ದಿನ ಅಲ್ಲಿನ ಸಮಸ್ಯೆಗಳನ್ನು ಆಲಿಸಲು ನಿರ್ಧರಿಸಿರುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ