ಬೆಂಗಳೂರು, ಸೆ.4- ಹತ್ತು ಸಾವಿರ ಕೋಟಿ ರೂ.ಗಳ ಬಿಬಿಎಂಪಿ ಬಜೆಟ್ ಮಂಡಿಸಿದರೂ ಸುಮಾರು 500 ಕೋಟಿಯಷ್ಟು ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲು ನಿಮಗೇನು ಸಮಸ್ಯೆ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.
ಇಂದು ನಗರ ಪ್ರದಕ್ಷಿಣೆ ವೇಳೆ ಭಾರತಿನಗರದ ಸರ್ಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿ ಶಾಲಾ ಕಟ್ಟಡದ ದುರವಸ್ಥೆ ಕಂಡು ಅಧಿಕಾರಿಗಳ ಮೇಲೆ ಹರಿಹಾಯ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಮಾರು 10 ಕೋಟಿ ರೂ.ಗಳಷ್ಟು ಬಜೆಟ್ ಮಂಡಿಸಿದರೂ ಇಲ್ಲಿನ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳ ಅವ್ಯವಸ್ಥೆ ಸರಿಪಡಿಸಲು ಏಕೆ ಮುಂದಾಗಿಲ್ಲ ಎಂದು ಕಿಡಿಕಾರಿದಾಗ, ಸ್ಥಳೀಯ ಬಿಬಿಎಂಪಿ ಸದಸ್ಯರು ಶಾಲೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗೆ ಎಸ್ಟಿಮೇಟ್ ಹಾಕಲಾಗಿದೆ ಎಂದು ಉತ್ತರಿಸುತ್ತಿದ್ದಂತೆ ಅಧಿಕಾರಿಗಳಿಗೆ ಕಾಯುತ್ತ ಕೂರದೆ ಶೀಘ್ರವೇ ಸಮಸ್ಯೆ ಬಗೆಹರಿಸಲು ಮುಂದಾಗಿ ಶಾಲೆಗಳ ಅವ್ಯವಸ್ಥೆ ಸರಿಪಡಿಸಿ ಎಂದು ಸೂಚಿಸಿದರು.
ಎಸ್ಟಿಮೇಟ್ ತನ್ನಿ, ನಾನೇ ಐದು ಕೋಟಿ ಕೊಡಿಸುತ್ತೇನೆ. ಕೂಡಲೇ ಅಭಿವೃದ್ಧಿ ಕೆಲಸ ಮಾಡಿಸಿ ಎಂದು ಹೇಳಿದರು.
ಇದೇ ವೇಳೆ ಸರ್ಕಾರಿ ಉರ್ದು ಶಾಲೆಯ ಮಕ್ಕಳೊಂದಿಗೆ ಪರಮೇಶ್ವರ್ ಚರ್ಚೆ ನಡೆಸಿದರು. ಏನೇನು ಕಲಿತಿದ್ದೀರಿ, ಕನ್ನಡದಲ್ಲೇ ಹೇಳಿ ಎಂದಾಗ, ಮಕ್ಕಳು ನಿರುತ್ತರರಾದರು.
ಅಲ್ಲಿಂದ ಭಾರತಿನಗರದ ಹೆರಿಗೆ ಆಸ್ಪತ್ರೆಗೆ ಭೇಟಿ ಅಲ್ಲಿನ ಚಿಕಿತ್ಸಾ ಪದ್ಧತಿ, ಸ್ವಚ್ಛತೆ, ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.