ಬೆಂಗಳೂರು, ಸೆ.2- ಮೂರು ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಲಬ್ಡಬ್ ಶುರುವಾಗಿದೆ.
ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಚುನವಣೆ ನಡೆದಿದ್ದು, ನಾಳೆ ಬೆಳಗ್ಗೆ 8 ಗಂಟೆಯಿಂದ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆಗಳ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಣಿಕೆಗಾಗಿ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಚುನಾವಣೆಯಲ್ಲಿ ಒಟ್ಟು 2634 ವಾರ್ಡ್ಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷೇತರರು ಸೇರಿದಂತೆ 9121 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನಾಳೆ ಇವರ ಭವಿಷ್ಯ ಗೊತ್ತಾಗಲಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಅಸ್ತ್ರವಾಗಲಿದೆ.
ಕಾಂಗ್ರೆಸ್-ಜೆಡಿಎಸ್ ಫ್ರೆಂಡ್ಲಿ ಫೈಟ್ ಮಾಡಿದ್ದು, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಮತದಾರರ ಪಟ್ಟಿ ಹಿಡಿದು ತಮಗೆ ದೊರಕಬಹುದಾದ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ವಿಧಾನಸಭೆ, ಲೋಕಸಭೆ ಚುನಾವಣೆ ಮೀರಿಸುವಂತೆ ಹಲವೆಡೆ ಈ ಚುನಾವಣೆ ನಡೆದಿದೆ. ಅಭ್ಯರ್ಥಿಗಳು ಮತದಾರರ ಮನವೊಲಿಸಲು ವಿವಿಧ ಆಮಿಷಗಳನ್ನು ಒಡ್ಡಿದ್ದರು.
ಏನಾದರೂ ಮಾಡಿ ಗೆಲುವು ಸಾಧಿಸಬೇಕೆಂಬ ಹಿನ್ನೆಲೆಯಲ್ಲಿ ಹಲವು ಕಸರತ್ತುಗಳನ್ನು ಕೂಡ ನಡೆಸಿದ್ದರು. ಹಲವರು ತಮ್ಮ ಅಸ್ತಿತ್ವಕ್ಕಾಗಿ ಚುನಾವಣಾ ಕಣದಲ್ಲಿದ್ದರು. ವಿವಿಧ ನಗರಸಭೆಯ 12 ವಾರ್ಡ್ಗಳಿಂದ ಮತ್ತು ಪುರಸಭೆಯ 18 ವಾರ್ಡ್ಗಳಿಂದ 29 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿ 42 ವಾರ್ಡ್ಗಳ ಚುನಾವಣೆಯನ್ನು ಮುಂದೂಡಲಾಗಿದೆ. ಕಲಬುರಗಿ ಜಿಲ್ಲೆಯ ಅಫ್ಜಲ್ಪುರ ವಾರ್ಡ್ ಸಂಖ್ಯೆ 19ರ ನಾಮಪತ್ರ ತಿರಸ್ಕøತಗೊಂಡಿದ್ದರಿಂದ ಚುನಾವಣೆ ನಡೆದಿಲ್ಲ ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪುರಸಭೆ ವಾರ್ಡ್ ಸಂಖ್ಯೆ 9ರ ಬಿಎಸ್ಪಿ ಅಭ್ಯರ್ಥಿ ನಿಧನದಿಂದ ಚುನಾವಣೆ ರದ್ದಾಗಿತ್ತು. ಇನ್ನುಳಿದಂತೆ ನಡೆದಿರುವ ಎಲ್ಲ ವಾರ್ಡ್ಗಳ ಮತ ಎಣಿಕೆ ನಾಳೆ ಬೆಳಗ್ಗೆ ಪ್ರಾರಂಭವಾಗಲಿದ್ದು, ವಿದ್ಯುನ್ಮಾನ ಮತಯಂತ್ರ ಬಳಕೆಯಾಗಿರುವುದರಿಂದ ನಾಳೆ ಮಧ್ಯಾಹ್ನದೊಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.
ನಾಳೆ ಸಂಜೆ ವೇಳೆಗೆ ಯಾವ ಪಕ್ಷ, ಯಾವ ಪುರಸಭೆ, ಯಾವ ಪಟ್ಟಣ ಪಂಚಾಯ್ತಿ, ಯಾವ ನಗರಸಭೆಗಳ ಅಧಿಕಾರ ಗದ್ದುಗೆ ಏರಲಿದೆ ಎಂಬುದು ಗೊತ್ತಾಗಲಿದೆ.