ನಾಳೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಸೋಲು-ಗೆಲುವಿನ ಬಗ್ಗೆ ಭಾರೀ ಬೆಟ್ಟಿಂಗ್

ಬೆಂಗಳೂರು, ಸೆ.2- ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ನಡೆದ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಬೆಂಬಲಿಗರು ಭಾರೀ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ.

ಶಿವಮೊಗ್ಗ, ತುಮಕೂರು, ಮೈಸೂರು ಮೂರು ಮಹಾನಗರ ಪಾಲಿಕೆ ಹಾಗೂ 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿ ಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತದಾರರ ಪಟ್ಟಿ ಹಿಡಿದು ತಮಗೆ ದೊರಕಬಹುದಾದ ಮತಗಳ ಬಗ್ಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸುತ್ತಿರುವ ದೃಶ್ಯ ಕಂಡುಬರುತ್ತಿದೆಯಲ್ಲದೆ ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬಾಜಿ ಕಟ್ಟುವವರು ಹೆಚ್ಚಾಗಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಈ ಫಲಿತಾಂಶದ ಮೇಲೆ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರು ಭಾರೀ ಬೆಟ್ಟಿಂಗ್ ಕಟ್ಟಿದ್ದಾರೆ. ಅಬ್ಬರದ ಪ್ರಚಾರ ನಡೆಸಿ ಮನೆಮನೆಗೆ ಹೋಗಿ ಮತದಾರರನ್ನು ಮನವೊಲಿಸಿ ಮತ ಪಡೆಯಲು ಕಸರತ್ತು ಮಾಡಿರುವ ಅವರು ತಮ್ಮ ಅಭ್ಯರ್ಥಿಗಳು ಗೆಲ್ಲಲೇಬಹುದೆಂಬ ಹಿನ್ನೆಲೆಯಲ್ಲಿ ಹಣ, ಹಲವು ವಸ್ತುಗಳನ್ನು ಪಣಕ್ಕಿಟ್ಟಿದ್ದಾರೆ.
ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಯಲ್ಲಿ ಚುನಾವಣಾ ಬೆಟ್ಟಿಂಗ್, ಚುನಾವಣಾ ಬಾಜಿ ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಬೆಂಬಲಿಗರ ನಡುವೆಯೇ ಈ ಬಾಜಿ ಹೆಚ್ಚಾಗಿರುವುದು ವಿಶೇಷ.

ಶಿವಮೊಗ್ಗದಲ್ಲಿ ಬಿಜೆಪಿ ಪರವಾಗಿ ಬೆಟ್ಟಿಂಗ್ ಜೋರಾಗಿದ್ದರೆ, ಮೈಸೂರಿನಲ್ಲಿ ಜೆಡಿಎಸ್ ಪರವಾಗಿ ಬಾಜಿ ಕಟ್ಟುವವರು ಹೆಚ್ಚಾಗಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಬೆಟ್ಟಿಂಗ್ ಜೋರಾಗಿದೆ. ಇನ್ನು ನಗರಸಭೆಗೆ ಸಂಬಂಧಪಟ್ಟಂತೆ ಬೆಳಗಾವಿ, ಬಳ್ಳಾರಿ, ಬೀದರ್, ಚಿತ್ರದುರ್ಗ ಮುಂತಾದ ಕಡೆ ಭಾರೀ ಪ್ರಮಾಣದ ಹಣ, ವಾಹನಗಳನ್ನು ಪಣಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಷ್ಟೇ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿ ಹಲವೆಡೆ ಸಮಬಲದ ಪೈಪೆÇೀಟಿ ನೀಡಿರುವುದರಿಂದ ಚುನಾವಣಾಸಕ್ತರ ಗಮನವೆಲ್ಲ ನಾಳಿನ ಫಲಿತಾಂಶದತ್ತ ಕೇಂದ್ರೀಕೃತವಾಗಿದೆ.

ನಗರ ಪ್ರದೇಶಗಳಲ್ಲಿ ಜನ ಬಿಜೆಪಿಯತ್ತ ಹೆಚ್ಚು ಒಲವು ವ್ಯಕ್ತಪಡಿಸುತ್ತಾರೆ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಸಹಜವಾಗಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರದಲ್ಲಿ ಹೆಚ್ಚು ಜನರು ಬಿಜೆಪಿ ಪರವಾಗಿ ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸದ್ದು ಮಾಡದಿದ್ದರೂ ಹಣದ ಹೊಳೆಯೇ ಹರಿದಿದೆ. ಮತದಾರರ ಮನವೊಲಿಕೆಗೆ ಹಣ, ಉಡುಗೊರೆ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಲಾಗಿದೆ. ಮತಗಟ್ಟೆ ಕೇಂದ್ರದ ಬಳಿಯೇ ಹಣ ಹಂಚುತ್ತಿದ್ದುದು ಹಲವೆಡೆ ಕಂಡುಬಂದಿತ್ತು.
ಹೀಗಾಗಿ ನಾಳಿನ ಫಲಿತಾಂಶದ ಮೇಲೆ ಭಾರೀ ಪ್ರಮಾಣದಲ್ಲಿ ಬಾಜಿ ಕಟ್ಟಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ