ಬೆಂಗಳೂರು, ಆ.28- ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಮಹದಾಯಿ ನದಿ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದರು.
ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿರುವ ಹೋರಾಟ ಕುರಿತಂತೆ ಮುಖ್ಯಮಂತ್ರಿಯೊಂದಿಗೆ ನಡೆಸುವ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಆನಂತರ ಮುಂದಿನ ಹೋರಾಟದ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೇರೆ ರಾಜ್ಯದ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ, ಕರ್ನಾಟಕಕ್ಕೆ ಮಹದಾಯಿ ವಿಚಾರದಲ್ಲಿ ಅನ್ಯಾಯವಾಗಿದೆ. ನೆರೆಯ ಗೋವಾ ರಾಜ್ಯ ಏನಾದರು ಮಾಡಿಕೊಳ್ಳಲಿ. ನಾವು ನಮ್ಮ ರಾಜ್ಯದ ಹಿತ ಕಾಪಾಡಲು ಬದ್ಧ. ಇದಕ್ಕಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ದರಿರುವುದಾಗಿ ಸಚಿವರು ಹೇಳಿದರು.
ಕಾನೂನು ಹೋರಾಟಕ್ಕೂ ನಾವು ಸಿದ್ದರಿದ್ದು, ಎಲ್ಲ ಪಕ್ಷದ ಮುಖಂಡರು ರಾಜ್ಯದ ಹಿತ ಕಾಪಾಡಲು ಮುಂದಾಗಬೇಕು. ಮಹದಾಯಿ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡುವುದು ಬೇಡ. ಎಲ್ಲರು ಒಟ್ಟಾಗಿ ಹೋರಾಟವನ್ನು ಮುಂದುವರೆಸೋಣ ಎಂದು ವಿರೋಧ ಪಕ್ಷಗಳಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.