ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ವಿಷ ಸೇವಿಸಿ ಆತ್ಮಹತ್ಯೆ

 

ಹಾಸನ, ಆ.27- ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಅರಕಲಗೂಡಿನಲ್ಲಿ ನಡೆದಿದೆ.
ಅರಕಲಗೂಡು ಪಟ್ಟಣದ ಹೊರವಲಯದಲ್ಲಿರುವ ದೊಡ್ಡನಾಯಕ ಕೊಪ್ಪಲಿನಲ್ಲಿ ಇಂಥದ್ದೊಂದು ಮನಕಲಕುವ ಘಟನೆ ನಡೆದಿದೆ. ದೊಡ್ಡನಾಯಕನ ಕೊಪ್ಪಲು ಗ್ರಾಮದ ಕೃಷ್ಣ (55), ಪತ್ನಿ ನಂಜಮ್ಮ (50) ಹಾಗೂ ಪುತ್ರಿ ಭೂಮಿಕಾ (22) ಬಲಿಯಾಗಿದ್ದಾರೆ.
ಹಿನ್ನೆಲೆ:
ಆ.6ರಂದು ದೊಡ್ಡನಾಯಕನ ಕೊಪ್ಪಲು ಗ್ರಾಮದ ನಾಗರಾಜು ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಡಿಕೆ ಬೊಮ್ಮನಹಳ್ಳಿ ಗ್ರಾಮದ ಶ್ರೀಧರ ಮತ್ತು ಕೃಷ್ಣ ಅವರ ಪುತ್ರ ಲೋಕೇಶ ಅವರನ್ನು ಪೆÇಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಈ ಮಧ್ಯೆ ನಾಗರಾಜು ಕೊಲೆ ಹಿಂದೆ ಕೃಷ್ಣ ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎಂದು ನಾಗರಾಜು ಮನೆಯವರು ಆರೋಪಿಸಿದ್ದರು. ಜೊತೆಗೆ ಆರೋಪ ಸಾಬೀತಾದರೆ ಕೃಷ್ಣ ಅವರ ಮನೆಯನ್ನು ಕುಟುಂಬ ಸಮೇತ ಸುಟ್ಟು ಹಾಕುವುದಾಗಿ ಮೃತ ನಾಗರಾಜು ಕುಟುಂಬದವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಕೊಲೆ ಪ್ರಕರಣದಲ್ಲಿ ತಮ್ಮ ಮಗನನ್ನು ಪೆÇಲೀಸರು ಬಂಧಿಸಿ ವಿಚಾರಣೆ ಮಾಡಿದ ಹಿನ್ನೆಲೆಯಲ್ಲಿ ಕುಟುಂಬದ ಮಾನವೇ ಹೋಯಿತೆಂದು ತಿಳಿದ ಕೃಷ್ಣ ಅವರ ಕುಟುಂಬ ಸಾಯಲು ನಿರ್ಧರಿಸಿದೆ. ನಿನ್ನೆ ಬೆಳೆಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕವನ್ನು ಮಧ್ಯಾಹ್ನದ ಊಟದಲ್ಲಿ ಬೆರೆಸಿಕೊಂಡು ಕುಟುಂಬದ ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತ್ರಿಕೋನ ಪ್ರೇಮ ಪ್ರಕರಣ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಭೂಮಿಕಾಳನ್ನು ಕೊಲೆಯಾದ ಅದೇ ಗ್ರಾಮದ ನಾಗರಾಜು ಹಾಗೂ ಅಡಿಕೆ ಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಎಂಬಿಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಾಗರಾಜು ಅನುಮಾನಾಸ್ಪದವಾಗಿ ಕೊಲೆಯಾಗಿದ್ದು, ಇದರ ವಿಚಾರಣೆ ನಡೆಯುತ್ತಿತ್ತು. ನಾಗರಾಜು ಕುಟುಂಬವೂ ತನ್ನ ದೂರಿನಲ್ಲಿ ಕೃಷ್ಣ ಕುಟುಂಬದ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಕೃಷ್ಣ ಅವರ ಕುಟುಂಬಕ್ಕೆ ಬೆದರಿಕೆ ಕೂಡಾ ಹಾಕಿದ್ದರು ಎನ್ನಲಾಗುತ್ತಿದೆ. ನಾಗರಾಜು ಕೊಲೆ ಪ್ರಕರಣದ ಹಿಂದೆ ಈ ಭೂಮಿಕಾಳ ಪ್ರೇಮ ಪ್ರಕರಣವಿತ್ತು ಎನ್ನಲಾಗಿದೆ.
ಹಾಗಾಗಿ ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ಪೆÇಲೀಸರು ಪಕ್ಕದ ಅಡಿಕೆ ಬೊಮ್ಮನಹಳ್ಳಿ ಗ್ರಾಮದ ಶ್ರೀಧರ್‍ನನ್ನು ಬಂಧಿಸಿದ್ದರು. ಜೊತೆಗೆ ಎರಡು ದಿನಗಳ ಹಿಂದೆ ಮೃತ ಭೂಮಿಕಾ ಸಹೋದರ ಲೋಕೇಶನನ್ನು ಪೆÇಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ಸಂಬಂಧ ಅರಕಲಗೂಡು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ