ಕರ ಭಾರದ ಹೊರೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಮಹಾನಗರದ ಜನತೆಗೆ ಸಾರಿಗೆ ಸೆಸ್ ಮೂಲಕ ಮತ್ತೊಂದು ತೆರಿಗೆ ವಿಧಿಸಲು ಮುಂದಾಗಿರುವ ಬಿಬಿಎಂಪಿ ಕ್ರಮ

ಬೆಂಗಳೂರು, ಆ.27-ಕರ ಭಾರದ ಹೊರೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಮಹಾನಗರದ ಜನತೆಗೆ ಸಾರಿಗೆ ಸೆಸ್ ಮೂಲಕ ಮತ್ತೊಂದು ತೆರಿಗೆ ವಿಧಿಸಲು ಮುಂದಾಗಿರುವ ಬಿಬಿಎಂಪಿ ಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಸ್ತಿ ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಹೆಚ್ಚಳ, ಶಿಕ್ಷಣ ಸೆಸ್, ಸ್ವಚ್ಛತಾ ಸೆಸ್, ಪೆಟ್ರೋಲ್, ದಿನನಿತ್ಯದ ಪದಾರ್ಥಗಳ ಬೆಲೆ ಏರಿಕೆ ಸೇರಿದಂತೆ ಹಲವು ಬೆಲೆ ಏರಿಕೆ, ತೆರಿಗೆಗಳಿಂದ ಈಗಾಗಲೇ ಹೈರಾಣಾಗಿರುವ ನಗರದ ಜನತೆಗೆ ಬಿಬಿಎಂಪಿ ಶೇ.2ರಷ್ಟು ಸಾರಿಗೆ ಸೆಸ್ ವಿಧಿಸಲು ಮುಂದಾಗಿದ್ದು, ನಾಳೆ ಈ ಕುರಿತು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಆಸ್ತಿ ತೆರಿಗೆಯನ್ನು 20 ರಿಂದ 25ರಷ್ಟು ಹೆಚ್ಚಿಸಿ ನಗರ ವಾಸಿ ಆಸ್ತಿ ಮಾಲೀಕರ ಮೇಲೆ ಗದಾಪ್ರಹಾರ ಮಾಡಿದ್ದ ಬಿಬಿಎಂಪಿ, ಇದೀಗ ತೆರಿಗೆ ಮೊತ್ತದ ಶೇ.2ರಷ್ಟು ನಗರ ಭೂ ಸಾರಿಗೆ ಉಪಕರ ವಸೂಲಿಗೆ ಮುಂದಾಗಿದೆ.
ಬೆಂಗಳೂರಿನ ರಸ್ತೆಗಳ ದುಸ್ಥಿತಿಯಿಂದಾಗಿ ಬಿಎಂಟಿಸಿ ಬಸ್‍ಗಳು ಹಾಳಾಗುತ್ತಿದೆ. ಹೀಗಾಗಿ ನಗರ ಭೂ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಬಿಬಿಎಂಪಿ ಹಣ ನೀಡಬೇಕೆಂದು ಕಳೆದ ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದನ್ನು ಪುರಸ್ಕರಿಸಿರುವ ರಾಜ್ಯಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮೊತ್ತದ ಶೇ.2ರಷ್ಟು ನಗರ ಭೂ ಸಾರಿಗೆ ಸೆಸ್ ವಸೂಲಿಗೆ ಅನುಮತಿ ನೀಡಿದೆ. ಕೌನ್ಸಿಲ್ ಅನುಮೋದನೆಗಾಗಿ ಮಂಡಿಸಲಾಗುತ್ತಿದ್ದು, ಇನ್ನು ಮುಂದೆ ಶೇ.2ರಷ್ಟು ಹೆಚ್ಚುವರಿ ತೆರಿಗೆ ಪಾವತಿ ಮಾಡಬೇಕಾಗಿದೆ.

ಸಾರಿಗೆ ಸೆಸ್ ಈ ಹಿಂದೆಯೇ ಚಾಲ್ತಿಯಲ್ಲಿತ್ತಾದರೂ ಆಸ್ತಿ ಮಾಲೀಕರಿಗೆ ಹೊರೆಯಾಗುವ ದೃಷ್ಟಿಯಿಂದ ಸೆಸ್ ವಸೂಲಿ ಹಿಂಪಡೆಯುವಂತೆ 2014ರಲ್ಲಿ ಕೌನ್ಸಿಲ್ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಇದನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿರುವ ಸರ್ಕಾರ, ಸೆಸ್ ವಸೂಲಿ ಮಾಡಲು ಸೂಚಿಸಿದೆ. ಹೀಗಾಗಿ ಬಿಬಿಎಂಪಿ ನಾಳೆ ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆ ಮಂಡನೆ ಮಾಡಲಿದೆ.
ಇದಿಷ್ಟೇ ಅಲ್ಲದೆ, 2013 ರಿಂದ ಸೆಸ್ ವಸೂಲಿ ಮಾಡಬೇಕಾಗಿತ್ತು. ಹಾಗಾಗಿ 2013-14 ಮತ್ತು 2018-19ರವರೆಗೆ ವಸೂಲಿಯಾಗದ ಉಪಕರದ ವಸೂಲಿಯ ಬಗ್ಗೆಯೂ ಕೂಡ ಚಿಂತನೆ ನಡೆಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಿಬಿಎಂಪಿ ಸಂಗ್ರಹಿಸುವ ಸಾರಿಗೆ ಸೆಸ್ ಹಣವನ್ನು ನಗರ ಭೂಸಾರಿಗೆ ಇಲಾಖೆಗೆ ಪಾವತಿಸಲಾಗುತ್ತದೆ. ಈ ಹಣವನ್ನು ಸಾರಿಗೆ ವ್ಯವಸ್ಥೆ ಉತ್ತಮ ಪಡಿಸಲು ವ್ಯಯಿಸಲಾಗುತ್ತದೆ.

ಬಿಬಿಎಂಪಿ ಕ್ರಮ:
ತೆರಿಗೆ ಭಾರದಿಂದ ನಲುಗುತ್ತಿರುವ ನಗರದ ಜನತೆಗೆ ಮತ್ತಷ್ಟು ತೆರಿಗೆ ವಿಧಿಸುತ್ತಿರುವುದು ಸಮಂಜಸವೇ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಈ ಬಗ್ಗೆ ಕ್ರಮಕೈಗೊಳ್ಳುತ್ತದೆ ಎಂದಷ್ಟೇ ಹೇಳಿ ನುಣುಚಿಕೊಂಡರು.

ಸೋರಿಕೆ ತಡೆಗಟ್ಟಲಿ:
ಬಿಬಿಎಂಪಿ ಹೊಸ ತೆರಿಗೆ ವಿಧಿಸುತ್ತಿರುವ ಕ್ರಮ ಸರಿಯಲ್ಲ. ಅಲ್ಲಿ ಆಗುತ್ತಿರುವ ಸೋರಿಕೆಯನ್ನು ಮೊದಲು ತಡೆಗಟ್ಟಲಿ. ಸೋರಿಕೆ ತಡೆಗಟ್ಟಿದರೆ ಸುಮಾರು 3 ಸಾವಿರ ಕೋಟಿಯಷ್ಟು ಉಳಿತಾಯವಾಗುತ್ತದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಕೇವಲ 40 ಕೋಟಿ ತೆರಿಗೆ ಸಂಗ್ರಹಕ್ಕೆ ಒಂದು ಕೋಟಿ ಜನರಿಗೆ ತೆರಿಗೆ ವಿಧಿಸುವುದು ಸರಿಯಲ್ಲ, ಮೊದಲು ಸೋರಿಕೆ ತಡೆಗಟ್ಟಲಿ ಎಂದು ಗುಡುಗಿದರು.
ಕೇಂದ್ರ-ರಾಜ್ಯ ನಿರ್ದೇಶನದಂತೆ ಕ್ರಮ:
ಟ್ರಾನ್ಸ್ ಪೆÇೀರ್ಟ್ ಸೆಸ್ ವಿಧಿಸುವ ಜವಾಬ್ದಾರಿಯನ್ನು ಬಿಜೆಪಿ ಹೊತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮಕೈಗೊಳ್ಳಬೇಕಿದೆ. ನರ್ಮ್ ಯೋಜನೆಯಡಿ ಟ್ರಾನ್ಸ್‍ಪೆÇೀರ್ಟ್ ಸೆಸ್ ವಿಧಿಸಬೇಕೆಂಬ ನಿಯಮವಿದೆ. ಅದರ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ. ಇದೀಗ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಬೇಕಿದೆ. ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ