ಸೂರು ಪಡೆಯಲು ಪರದಾಟ

 

ಬೆಂಗಳೂರು, ಆ.22- ದೇಶಕ್ಕೆ ಸ್ವತಂತ್ರ ಬಂದು 72 ವರ್ಷಗಳಾದರೂ ನೆತ್ತಿಗೊಂದು ಸೂರು ಪಡೆಯುವಲ್ಲಿ ಜನರು ಪರದಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಕರ್ನಾಟಕ ರಿಪಬ್ಲಿಕನ್ ಸೇನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ಕ್ಷೇತ್ರದ ಬಿದರಹಳ್ಳಿ ಹೋಬಳಿ ಆವಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕೆಆರ್‍ಎಸ್ ಬಿದರಹಳ್ಳಿ ಹೋಬಳಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನೆತ್ತಿಗೊಂದು ಸೂರು ಪಡೆಯಲು ಬಡವರು ನಿರಂತರ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡವರಿಗೆಲ್ಲಾ ಸೂರು ಸಿಕ್ಕಾಗ ಮಾತ್ರ ನಿಜವಾದ ಸ್ವತಂತ್ರ ಬಂದಂತಾಗುತ್ತದೆ ಎಂದು ಹೇಳಿದರು.
ಸಂವಿಧಾನ ಪ್ರಕಾರ ದೇಶದಲ್ಲಿ ಪ್ರತಿಯೊಬ್ಬ ಪ್ರಜೆ ಸ್ವಂತ ನಿವೇಶನ ಹೊಂದುವುದು ನಮ್ಮೆಲ್ಲರ ಹಕ್ಕಾಗಿದೆ ಎಂದರು.
ಜಾತಿಯತೆ, ಅಸಮಾನತೆ, ಹಸಿವು, ದೌರ್ಜನ್ಯ, ನಿರುದ್ಯೋಗ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಶ್ರೀಮಂತರು ಅತೀ ಶ್ರೀಮಂತರಾಗುತ್ತಿದ್ದಾರೆ. ಬಡವರು ಅತೀ ಬಡವರಾಗುತ್ತಿದ್ದಾರೆ. ಬೆಂಗಳೂರು ಪೂರ್ವ ತಾಲ್ಲುಕು ಮಹದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಡವರು ಸ್ವಂತ ನಿವೇಶನ ಕೋರಿ ಅರ್ಜಿ ಸಲ್ಲಿಸಿ ಹಲವು ದಿನಗಳಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ನಿವೇಶನ ಮಂಜೂರು ಮಾಡಲು ಬೆಂಗಳೂರು ಪೂರ್ವ ತಾಲ್ಲುಕು ತಹಶೀಲ್ದಾರ್ ಒಪ್ಪಿದ್ದು ಸರ್ವೆ ಇಲಾಖೆಯ ಅಕಾರಿಗಳ ಬೇಜವ್ದಾರಿಯಿಂದ ತಡವಾಗುತ್ತಿದೆ ಎಂದು ದೂರಿದರು.
ಇಂದು ಸರ್ಕಾರ ಬಡವರಿಗೆ 20*30 ಅಳತೆಯ ನಿವೇಶನ ನೀಡಲು ಮುಂದಾಗಿರುವುದು ಬೇಸರದ ಸಂಗತಿಯಾಗಿದ್ದು ಅದು ಶ್ರೀಮಂತರ ಮನೆಯ ಶೌಚಾಲಯದ ಅಳತೆಯಾಗಿರುತ್ತದೆ ಎಂದು ತಿಳಿಸಿದರು.
ಬಡ ಜನರು ಒಗ್ಗಟ್ಟಾಗುವವರೆಗೆ ಶ್ರೀಮಂತರು ಬಡವರ ಮೇಲೆ ಸವಾರಿ ಮಾಡುತ್ತಿರುತ್ತಾರೆ ಎಂದು ಕಿಡಿಕಾರಿದರು.
ಇದೆ ತಿಂಗಳು 28 ರಂದು ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ಮುಂದೆ ನಿವೇಶನ ನೀಡುವ ವಿಚಾರದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಜಿಗಣಿ ಶಂಕರ್ ತಿಳಿಸಿದರು.
ಇದೆ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬಿದರಹಳ್ಳಿ ಹೋಬಳಿ ಅಧ್ಯಕ್ಷ ನಾಗೇಶ್ ಹಾಗೂ ಅವರ ಬೆಂಬಲಿಗರು ಜಿಗಣಿಶಂಕರ್ ನೇತೃತ್ವದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆಗೆ ಸೇರ್ಪಡೆಗೊಂಡರು.
ಕೆ.ಆರ್.ಎಸ್ ರಾಜ್ಯ ಪದಾಕಾರಿಗಳಾದ ಕನ್ನಲಿ ಕೃಷ್ಣಪ್ಪ, ಬೆಳತೂರು ವೆಂಕಟೇಶ್, ನಿರ್ಮಲಾ, ವೈಟ್‍ಪೀಲ್ಡ್ ಮುರ್ಗೇಶ್, ಬೆಂ.ಪೂ.ತಾ.ಅಧ್ಯಕ್ಷ ಕಾವೇರಪ್ಪ, ಗೋಪಾಲಪ್ಪ, ಗೋವಿಂದರಾಜು, ಶಿರಿಷಾ, ಜ್ಯೋತಿ, ರಾಜು ಮುಂತಾದವರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ