ಬೆಂಗಳೂರು,ಆ.19- ಭೀಕರ ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾಗಿರುವ ಮಡಿಕೇರಿ ಜಿಲ್ಲೆಗೆ ಬೆಂಗಳೂರು ಮಹಾನಗರದ ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ಹಾಗೂ ಪದಾಧಿಕಾರಿಗಳು ತಲಾ 10 ಸಾವಿರ ಪರಿಹಾರ ನೀಡಲು ತೀರ್ಮಾನಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶಾಸಕ ಆರ್.ಅಶೋಕ್, ಹಿರಿಯ ಮುಖಂಡರಾದ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ, ಮಾಜಿ ಸದಸ್ಯೆ ತಾರಾ ಅನುರಾಧ, ಬಿಬಿಎಂಪಿ ಸದಸ್ಯರು, ಬೆಂಗಳೂರು ಮಹಾನಗರ ಘಟಕದ ಪ್ರಮುಖ ಪದಾಧಿಕಾರಿಗಳು ಸೇರಿದಂತೆ ಮತ್ತಿತರರ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಶತಮಾನದಲ್ಲೇ ಕಂಡರಿಯದ ಭೀಕರ ಮಳೆಯಿಂದಾಗಿ ಸಾವು-ನೋವು ಸಂಭವಿಸಿ ಮಡಿಕೇರಿ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ಹಾಗೂ ಪದಾಧಿಕಾರಿಗಳು ತಲಾ 10 ಸಾವಿರ ಪರಿಹಾರ ನೀಡಬೇಕೆಂದು ಅಶೋಕ್ ಮನವಿ ಮಾಡಿದರು.
ಅಶೋಕ್ ಅವರ ಮನವಿಗೆ ವಿ.ಸೋಮಣ್ಣ, ತೇಜಸ್ವಿನಿಗೌಡ, ಶಾಸಕರಾದ ಡಾ.ಅಶ್ವಥ್ ನಾರಾಯಣ, ಸತೀಶ್ ರೆಡ್ಡಿ , ಎಸ್.ಆರ್.ವಿಶ್ವನಾಥ್, ರಘು ಸೇರಿದಂತೆ ಬಿಬಿಎಂಪಿಯ ಎಲ್ಲ ಸದಸ್ಯರು ಸಮ್ಮತಿಸಿದರು.
ಇನ್ನು ಪದಾಧಿಕಾರಿಗಳು ಕೂಡ ತಲಾ 10 ಸಾವಿರ ಪರಿಹಾರ ನೀಡುವಂತೆ ಮಾಡಿಕೊಂಡ ಮನವಿಗೆ ಎಲ್ಲರೂ ಸರ್ವಸಮ್ಮತದ ಒಪ್ಪಿಗೆಯನ್ನು ನೀಡಿದ್ದಾರೆ.
ಕೊಡಗು ಜಿಲ್ಲೆಗೆ 20 ಟ್ರಕ್ ಆಹಾರ ಪದಾರ್ಥಗಳು ಹಾಗೂ ಬಟ್ಟೆಗಳನ್ನು ಸರಬರಾಜು ಮಾಡಬೇಕು. ಇದಕ್ಕಾಗಿ ನಗರದಲ್ಲಿ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಸಂಘಸಂಸ್ಥೆಗಳು ಸೇರಿದಂತೆ ಮತ್ತಿತರರಿಂದ ಪಕ್ಷದ ಪ್ರಮುಖರು ದೇಣಿಗೆಯನ್ನು ಸಂಗ್ರಹಿಸಬೇಕೆಂಬ ಅಭಿಪ್ರಾಯವು ವ್ಯಕ್ತವಾಗಿದೆ.
ಪ್ರಮುಖವಾಗಿ ಸಂತ್ರಸ್ತರಿಗೆ ಔಷಧೋಪಾಚಾರ, ಬಟ್ಟೆ, ಕುಡಿಯುವ ನೀರಿನ ಬಾಟಲ್, ಆಹಾರ ಪೆÇಟ್ಟಣಗಳು, ಹೊದಿಕೆಗಳು, ಹಾಸಿಗೆ, ತಲೆದಿಂಬು, ಬ್ಯಾಟರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬೇಕು.
ನಗರದಲ್ಲಿ ಪಕ್ಷದ ಪ್ರಮುಖರು, ಖುದ್ದು ಉದ್ಯಮಿಗಳು ಹಾಗೂ ಐಟಿಬಿಟಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ ದೇಣಿಗೆ ಸಂಗ್ರಹಿಸಿ ಪಕ್ಷದ ಕಚೇರಿಗೆ ನೀಡಬೇಕು.
ಇನ್ನು ಸ್ವಯಂಪ್ರೇರಿತರಾಗಿ ಯಾರಾದರೂ ದೇಣಿಗೆ ನೀಡಲು ಬಂದರೆ ಅದನ್ನು ಸಂಗ್ರಹಿಸಿ ಕಚೇರಿಗೆ ತಲುಪಿಸಬೇಕೆಂದು ಪಕ್ಷದ ಪ್ರಮುಖರಿಗೆ ಅಶೋಕ್ ಹಾಗೂ ಸೋಮಣ್ಣ ಸೂಚನೆ ಕೊಟ್ಟರು.
ಸಂಗ್ರಹಿಸಿರುವ ಆಹಾರ ಪದಾರ್ಥಗಳು, ನಗದು ಎಲ್ಲಿಯೂ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು. ದೇಣಿಗೆ ಸಂಗ್ರಹ ಮುಗಿದ ನಂತರ ಮಡಿಕೇರಿಗೆ ತೆರಳಿ ಗಂಜಿ ಕೇಂದ್ರ ಹಾಗೂ ಮನೆ ಮನೆಗೆ ತೆರಳಿ ಇವುಗಳನ್ನು ವಿತರಣೆ ಮಾಡಬೇಕೆಂದು ಸೂಚಿಸಲಾಗಿದೆ.
ಒಂದು ಕುಟುಂಬಕ್ಕೆ ಒಂದು ಬ್ಯಾಗ್ನಲ್ಲಿ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತೆರಳಿ ನೀಡಬೇಕು. ಗಂಜಿ ಕೇಂದ್ರಗಳಲ್ಲಿ ಎಲ್ಲವನ್ನು ವಿತರಿಸಿದರೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡೆ ಮನೆ ಮನೆಗೆ ತೆರಳಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.
ನಾಳೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ಆರ್.ಅಶೋಕ್ ನೇತೃತ್ವದಲ್ಲಿ ತಂಡ ಮಡಿಕೇರಿಗೆ ತೆರಳಲಿದೆ.
ಸಭೆಯಲ್ಲಿ ಮಾಜಿ ಶಾಸಕ ಎಸ್.ಮುನಿರಾಜು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಸುಬ್ಬಣ್ಣ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.