ಬೆಂಗಳೂರು, ಆ.11-ಸಂಸತ್ತು ಆರಂಭದ ಕಾಲದಿಂದಲೂ ಅದರ ಮಹತ್ವ, ಅದರಲ್ಲಿ ಪಾಲ್ಗೊಂಡ ಸದಸ್ಯರ ಪಾತ್ರ, ಅದರ ಬೆಳವಣಿಗೆ ಹಾಗೂ ಬದಲಾದ ರಾಜಕೀಯ ಸನ್ನಿವೇಶ ಮತ್ತು ಸಾಮಾಜಿಕ ಹಿನ್ನೆಲೆಗಳು ಅನೇಕ ವಿಷಯಗಳನ್ನೊಳಗೊಂಡಿರುವ ಬಗ್ಗೆ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಡಾ.ಬಿ.ಎಲ್.ಶಂಕರ್ ಅವರು ಬರೆದಿರುವ ಭಾರತ ಸಂಸತ್ ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಎಂಬ ಪುಸ್ತಕ ನಾಳೆ ಲೋಕಾರ್ಪಣೆಯಾಗಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪುಸ್ತಕ ಬಿಡುಗಡೆ ಮಾಡಲಿದ್ದು, ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಟಾಚಲಯ್ಯ, ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪಾಲ್ಗೊಳ್ಳಲಿದ್ದಾರೆ.
ಅಂಕಿತ ಪ್ರಕಾಶ ಹೊರತಂದಿರುವ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಡಾ.ಬಿ.ಎಲ್.ಶಂಕರ್ ಮತ್ತು ವೆಲೇರಿಯನ್ ರೊಡ್ರಿಗಸ್ ಈ ಕೃತಿಯ ಮೂಲ ಲೇಖಕರು. ಪೆÇ್ರ.ಜೆ.ಎಸ್.ಸದಾನಂದ ಕೃತಿಯ ಅನುವಾದಕರು.
ಕೃತಿಯು ಮೂಲ ಆಂಗ್ಲ ಆವೃತ್ತಿಯ 8 ಅಧ್ಯಾಯಗಳನ್ನು ಒಳಗೊಂಡಿದೆ. ಅದರ ಕನ್ನಡ ಅವತರಣಿಕೆಯು ಭಾರತೀಯ ಸಂಸತ್ತಿನ ಬೆಳವಣಿಗೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಸಮಿತಿ ವ್ಯವಸ್ಥೆಯ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡಿದೆ. ಅಲ್ಲದೆ, ಆಂಗ್ಲ ಆವೃತ್ತಿಯು 14ನೇ ಲೋಕಸಭೆಯವರೆಗಿನ ನಡವಳಿಕೆಗಳನ್ನು ಮಾತ್ರ ಒಳಗೊಂಡಿತ್ತು.
ಆಂಗ್ಲ ಆವೃತ್ತಿಯ ಪ್ರಕಟಣೆಗಾಗಿ ಹಲವು ವರ್ಷಗಳ ನಂತರ ಪ್ರಸ್ತುತ ಅನುವಾದಿತ ಕೃತಿಯು ಹೊರಬರುತ್ತಿರುವುದರಿಂದ ಈ ಮಧ್ಯದ ಅವಧಿಯಲ್ಲಿ ನಡೆದ 15 ಮತ್ತು 16ನೇ ಲೋಕಸಭೆ ಚುನಾವಣೆ ನಂತರದಲ್ಲಿ ಸದಸ್ಯತ್ವದಲ್ಲದ ಬದಲಾವಣೆಯ ಸಂಕ್ಷಿಪ್ತ ಪರಿಚಯವನ್ನೂ ಸಹ ಇಲ್ಲಿ ಮಾಡಿಕೊಡಲಾಗಿದೆ.
ಬಿಡುಗಡೆಯಾಗುತ್ತಿರುವ ಕೃತಿಯು ಚಲನಶೀಲ ರಾಜಕೀಯ ಸಂಸ್ಥೆಯಾಗಿ ಭಾರತೀಯ ಸಂಸತ್ತು ವಿಕಾಸಗೊಂಡ ಬಗೆಯನ್ನು ವಿವರಿಸುತ್ತದೆ. ಇದು ಕೇವಲ ಸಂಸತ್ತು ಎನ್ನುವ ರಾಜಕೀಯ ಸಂಸ್ಥೆಯ ಕಥನ ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವ, ರಾಜಕೀಯ ಪ್ರಕ್ರಿಯೆಯ ಸಂಕೀರ್ಣತೆಯ ಎಲ್ಲಾ ಆಯಾಮಗಳನ್ನು ಓದುಗರಿಗೆ ತೆರೆದಿಡುತ್ತದೆ.