ಕೈಕೊಡಲು ಮುಂದಾದ ಕಾಂಗ್ರೆಸ್ ಶಾಸಕರು

 

ಬೆಂಗಳೂರು, ಆ.11-ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಭರವಸೆ ಹುಸಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ಕೈಕೊಡಲು ಮುಂದಾಗಿರುವ ವಿಷಯ ನಾಯಕರಲ್ಲಿ ಆತಂಕ ಸೃಷ್ಟಿಸಿದೆ.
ಉತ್ತರ ಕರ್ನಾಟಕದ ನಾಲ್ವರು, ಹಳೇ ಮೈಸೂರಿನ ಹಲವು ಶಾಸಕರು ಪರ್ಯಾಯ ಚಿಂತನೆ ನಡೆಸಿದ್ದಾರೆ ಎಂಬ ಅಂಶ ಕಾಂಗ್ರೆಸ್ ನಾಯಕರಲ್ಲಿ ಗಾಬರಿ ಹುಟ್ಟಿಸಿದೆ. ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಮಾಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು.
ಆದರೆ ಈ ಭರವಸೆ ಈಡೇರುವ ಸಾಧ್ಯತೆ ಕ್ಷೀಣವಾಗಿದೆ. ತಿಂಗಳ ಅಂತ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಇದರ ಫಲಿತಾಂಶವನ್ನು ಆಧರಿಸಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಬೇಸತ್ತ ಸಚಿವಾಕಾಂಕ್ಷಿಗಳು ಬೇರೆ ನಿರ್ಧಾರ ಕೈಗೊಂಡಿದ್ದಾರೆ. ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಸ್ಥಳೀಯ ಸಂಸ್ಥೆ ಚುನಾವಣೆ ನಂತರವೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಮಾಡುವ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗೇ ಇದ್ದರೆ ನಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಚಿಂತನೆ ನಡೆಸಿರುವ ಹಲವು ಶಾಸಕರ ಜೊತೆ ಬಿಜೆಪಿ ಮುಖಂಡರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಂಪುಟ ವಿಸ್ತರಣೆ, ನಿಗಮಮಂಡಳಿಗಳ ನೇಮಕ ಮುಂದೂಡಿಕೆ ಯಾಗುತ್ತಿರುವುದು ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ. ಸಂಪುಟದಲ್ಲಿ ಸ್ಥಾನ ಪಡೆಯಲು ಈಗಾಗಲೇ ದೆಹಲಿಗೆ ತೆರಳಿ ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಹೈಕಮಾಂಡ್ ನಾಯಕರು ಇವರ ಮನವಿಗೆ ಕಿವಿಗೊಟ್ಟಿಲ್ಲ. ರಮೇಶ್ ಜಾರಕಿ ಹೊಳಿ ತಮ್ಮ ಬೆಂಬಲಿಗರ ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟು ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದರಾದರೂ ರಾಹುಲ್ ಭೇಟಿ ಸಾಧ್ಯವಾಗಿಲ್ಲ.

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕೈ ಚೆಲ್ಲಿದಂತೆ ಕಂಡು ಬಂದಿದೆ. ಹಾಗಾಗಿ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ. ಹಾಗಾಗಿ ಮುಂದೂಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಹೈಕಮಾಂಡ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಒಂದು ಮೂಲದ ಪ್ರಕಾರ ಈ ತಿಂಗಳಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿದುಬಂದಿತ್ತು. ಆದರೆ ಚುನಾವಣೆ ಘೋಷಣೆಯಾಗಿದ್ದರಿಂದ ಇದು ಸಾಧ್ಯವಾಗದ ಮಾತಾಗಿದೆ. ಹಾಗಾಗಿ ಆಕಾಂಕ್ಷಿಗಳು ನಿರಾಸೆಗೊಳಗಾಗಿದ್ದಾರೆ. ಒಂದಲ್ಲ ಒಂದು ಕಾರಣವನ್ನು ಹೈಕಮಾಂಡ್ ನಾಯಕರು ಹೇಳುತ್ತಲೇ ಇರುತ್ತಾರೆ. ಹೀಗಾದರೆ ನಮಗೆ ಅಧಿಕಾರ ಸಿಗುವುದಿಲ್ಲ ಎಂದು ಕೆಲವು ಆಕಾಂಕ್ಷಿಗಳು ಅಲವತ್ತುಕೊಂಡಿದ್ದಾರೆ.

ಸಂಪುಟ ವಿಸ್ತರಣೆ ಸಂಬಂಧ ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಗುಳ್ನಗುತ್ತಲೇ ಹೇಳಿದರು. ಆದರೆ ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ವರಿಷ್ಠರ ಭರವಸೆಗಳು ಮೂಗಿಗೆ ತುಪ್ಪ ಸವರಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ