ಹೊಸದಿಲ್ಲಿ: ಇಂಡೋನೇಷ್ಯಾದಲ್ಲಿ ನಡೆಯಲಿರುವ 2018ನೇ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಮುನ್ನಡೆಯುವ ಅದೃಷ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಲಭಿಸಿದೆ.
ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬ್ಯಾಗ್ನಲ್ಲಿ ನಡೆಯಲಿರುವ 18ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಆಗಸ್ಟ್ 18ರಿಂದ ಸೆಪ್ಟೆಂಬರ್ 2ರ ವರೆಗೆ ಆಯೋಜನೆಯಾಗಲಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ನಗರಗಳು ಆತಿಥ್ಯ ವಹಿಸುತ್ತಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿರುವ 20ರ ಹರೆಯದ ನೀರಜ್ ಈ ಬಾರಿ ತ್ರಿವರ್ಣ ಧ್ವಜಧಾರಿಯಾಗಲಿದ್ದಾರೆ ಎಂದು ತಂಡವನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರಿಂದರ್ ಬಾತ್ರಾ ತಿಳಿಸಿದ್ದಾರೆ.
2017ರಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಹಾಗೂ 2016 ಐಎಎಫ್ ವಿಶ್ವ ಅಂಡರ್ 20 ಚಾಂಪಿಯನ್ಶಿಪ್ನಲ್ಲಿ ನೀರಜ್ ಚಿನ್ನದ ಪದಕ ಗೆದ್ದಿದ್ದರು.
ದಕ್ಷಿಣ ಕೊರಿಯಾದಲ್ಲಿ 2014ರಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಧ್ವಜಧಾರಿಯಾಗಿದ್ದರು. 11 ಚಿನ್ನ, 10 ಬೆಳ್ಳಿ ಹಾಗೂ 36 ಕಂಚಿನ ಪದಕ ಸೇರಿದಂತೆ ಒಟ್ಟು 57 ಪದಕಗಳನ್ನು ಭಾರತ ಗೆದ್ದಿತ್ತು.