ನವದೆಹಲಿ: ಗಡಿಯಲ್ಲಿ ಅಟ್ಟಹಾಸ ಮುಂದುವರಿಸಿರುವ ಉಗ್ರರು ಮತ್ತು ಪಾಕಿಸ್ತಾನ ಸೇನೆ ಈಗ ಇನ್ನೊಂದು ದುಷ್ಕೃತ್ಯಕ್ಕೆ ಸಜ್ಜಾಗಿರುವ ಆತಂಕಕಾರಿ ಮಾಹಿತಿವೊಂದು ಬಯಲಾಗಿದೆ.
ಹೌದು.., ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತೀಯ ಸೇನೆ ಬುದ್ಧಿ ಕಲಿಸಿದ್ದರೂ ಪಾಕ್ನ ಕುತಂತ್ರ ನಿಲ್ಲುತ್ತಿಲ್ಲ. ಈಗಾಗಲೇ ಗಡಿಯಲ್ಲಿ ನಿತ್ಯ ಗುಂಡಿನ ಮೊರೆತ ಕೇಳಿಬರುತ್ತಿದೆ. ಈಗ ಮತ್ತೊಂದು ಆಘಾತಕಾರಿ ವಿಚಾರವೊಂದು ಗುಪ್ತಚರ ಇಲಾಖೆಯಿಂದ ತಿಳಿದುಬಂದಿದೆ.
ಭಾರತದೊಳಗೆ ನುಸುಳಿ, ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ನೂರಾರು ಉಗ್ರರನ್ನು ಸಜ್ಜುಗೊಳಿಸುತ್ತಿದೆ ಎಂಬ ಮಾಹಿತಿ ಇತ್ತೀಚೆಗಷ್ಟೇ ಹೊರಬಂದಿತ್ತು. ಅಂತೆಯೇ ಪಾಕಿಸ್ತಾನದ ಗುಪ್ತಚರ ಏಜೆನ್ಸಿಯಾದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್ಐ) ಉಗ್ರರಿಗೆ 200 ಆ್ಯಂಟಿ ಥರ್ಮಲ್ (ಉಷ್ಣ ನಿರೋಧಕ) ಜಾಕೆಟ್ಗಳನ್ನು ಪೂರೈಸಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಭಾರತದ ಗಡಿಯಲ್ಲಿರುವ ಥರ್ಮಲ್ ಇಮೇಜಿಂಗ್ ಸಾಧನಗಳಿಂದ ತಪ್ಪಿಸಿಕೊಳ್ಳಲು ಈ ಕುಟಿಲೋಪಾಯ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಜಾಕೆಟ್ ಧರಿಸುವುದರಿಂದ ಉಗ್ರರ ಪತ್ತೆಯೂ ಅಸಾಧ್ಯವಾಗುತ್ತದೆ ಎಂದು ಗುಪ್ತಚರದಳವು ಗೃಹ ಇಲಾಖೆಗೆ ಮಾಹಿತಿ ನೀಡಿದೆ. ಪಾಕ್ ಸೇನೆಯು ಈ ದುಷ್ಕೃತ್ಯಕ್ಕೆ ಪ್ರಚೋದನೆ ನೀಡುತ್ತಿರುವುದಲ್ಲದೆ, ತಾನೂ ಸಾಥ್ ನೀಡಿ ತಂತ್ರ ಹೆಣೆಯುತ್ತಿದೆ ಎಂದೂ ಹೇಳಲಾಗ್ತಿದೆ.
ಭಾರತವು ಪಾಕ್ ಗಡಿಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರರನ್ನು ಸದೆಬಡಿದ ನಂತರ ಗಡಿ ಭಾಗದಲ್ಲಿ ಉಗ್ರರ ಉಪಟಳ ಎಲ್ಲೆ ಮೀರುತ್ತಿದೆ. ಪಾಕಿಸ್ತಾನದ ಈ ಕುತಂತ್ರದ ಬಗ್ಗೆ ಕೆಲವು ತಿಂಗಳ ಹಿಂದೆಯೇ ಭಾರತಕ್ಕೆ ಅನುಮಾನ ಮೂಡಿತ್ತು. ಜಮ್ಮು ಭಾಗದಲ್ಲಿ ಬಿಎಸ್ಎಫ್ ಪಡೆಯ ಮೇಲೆ ಪಾಕ್ ರೇಂಜರ್ಗಳು ಗುಂಡಿನ ದಾಳಿ ನಡೆಸಿದ್ದ ಸಂದರ್ಭದಲ್ಲಿ ಥರ್ಮಲ್ ಜಾಕೆಟ್ ಬಳಸಿದ್ದರ ವಿಚಾರ ತಿಳಿದುಬಂದಿತ್ತು.
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆ. 14 ರಂದು ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಭಾರತದ ವಿರುದ್ಧ ಪಾಕಿಸ್ತಾನ ಇಂತಹ ಕೃತ್ಯಗಳಿಗೆ ಮುಂದಾಗಿರುವುದು ಆತಂಕ ಮೂಡಿಸಿದೆ.