ಚೆನ್ನೈ: ಡಿಎಂಕೆ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಎಂ.ಕರುಣಾನಿಧಿ ಚೈತನ್ಯದ ಚಿಲುಮೆಯಾಗಿದ್ದರು. ೯೪ರ ಇಳಿ ವಯಸ್ಸಿನಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಸಾಧನೆಗೆ ವಯೋಮಾನ ಅಡ್ಡಿಯಲ್ಲ ಎಂಬುದನ್ನು ಅವರು ಸಾಬೀತು ಮಾಡಿದ್ದರು. ೯೦ನೇ ವಯಸ್ಸಿನಲ್ಲಿ ಟೆಲಿವಿಷನ್ಗಾಗಿ ಅವರು ಸ್ಕ್ರಿಪ್ಟ್ ಬರೆದು ಅಚ್ಚರಿ ಮೂಡಿಸಿದ್ದರು.
೧೧ನೇ ಶತಮಾನದ ವೈಷ್ಣವ ಸಂತ ರಾಮಾನುಜರ ಕುರಿತ ದೂರದರ್ಶನ ಧಾರಾವಾಹಿಗಾಗಿ ಅವರು ೨೦೧೫ರಲ್ಲಿ ಸಂಭಾಷಣೆ ಬರೆದಿದ್ದರು. ಹಿಂದುಳಿದ ವರ್ಗಗಳು, ಶೋಷಿತರು ಮತ್ತು ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ೧೧ನೇ ಶತಮಾನದಲ್ಲಿ ಶ್ರಮಿಸಿದ್ದ ಮಹಾ ಸಂತ ರಾಮಾನುಜರ ಬಗ್ಗೆ ಕರುಣಾ ಅಪಾರ ಗೌರವ ಹೊಂದಿದ್ದರು.
ಕರುಣಾನಿಧಿ ಬಹುಮುಖ ಪ್ರತಿಭೆಯ ಮುತ್ಸದ್ಧಿ. ಕವನ, ನಾಟಕ, ಕಲೆ, ಸಾಹಿತ್ಯ, ಸಿನಿಮಾ, ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರು ಹೆಸರು ಮಾಡಿದ್ದಾರೆ.
ಅವರಿಗೆ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದತ್ತ ಒಲವು ಮೂಡಿತ್ತು. ೧೯೪೧ರಲ್ಲಿ ಮಾನವ ನಿಸನ್ ಎಂಬ ಹಸ್ತಪತ್ರಿಕೆಯನ್ನು ಅವರು ಪ್ರಕಟಿಸುತ್ತಿದ್ದರು. ಬಳಿಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ೧೯೪೭ರಲ್ಲಿ ಎಂ.ಜಿ.ಅವರ ಮೊದಲ ಚಿತ್ರ ರಾಜಕುಮಾರಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದರು. ಶಿವಾಜಿ ಗಣೇಶ್ ಅವರ ಪ್ರಥಮ ಚಿತ್ರ ಪರಾಶಕ್ತಿಗಾಗಿ ಅವರು ಬರೆದ ಸಂಭಾಷಣೆ ಇಂದಿಗೂ ಜನಪ್ರಿಯ.
೭೦ಕ್ಕೂ ಹೆಚ್ಚು ತಮಿಳು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಕರುಣಾನಿಧಿ ಚಿತ್ರೋದ್ಯಮವನ್ನು ಶ್ರೀಮಂತಗೊಳಿಸಿದ್ದಾರೆ.