ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೂ ತಟ್ಟಿದ ಫ್ಲೆಕ್ಸ್, ಬ್ಯಾನರ್, ಪೆÇೀಸ್ಟರ್ ನಿಷೇಧದ ಬಿಸಿ

ಬೆಂಗಳೂರು, ಆ.7- ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಪೆÇೀಸ್ಟರ್ ಮತ್ತು ಭಿತ್ತಿಪತ್ರಗಳ ಮೇಲಿನ ನಿಷೇಧದ ಬಿಸಿ ಇದೀಗ ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೂ ತಟ್ಟಿದೆ.
ನಗರದ ರಸ್ತೆಗಳು ಮಾತ್ರವಲ್ಲ ಯಾವುದೇ ಕಾರ್ಯಕ್ರಮಗಳಲ್ಲೂ ಫ್ಲೆಕ್ಸ್ ಬ್ಯಾನರ್ ಬಳಸುವಂತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.
ದೇವಸ್ಥಾನ, ಹೋಟೆಲ್‍ಗಳು, ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಫ್ಲೆಕ್ಸ್ ಮತ್ತು ಬ್ಯಾನರ್ ಬಳಸುವಂತಿಲ್ಲ. ಅದೇ ರೀತಿ ಮಾಲ್‍ಗಳು ಕೂಡ ಜಾಹೀರಾತು ಹಾಕುವಂತಿಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮದುವೆ ಕಾರ್ಯಕ್ರಮ, ಮದುವೆ ಸಭಾಂಗಣದ ಒಳಗೆ, ಒಳಾಂಗಣ ಸಭೆಗಳ ಬ್ಯಾಕ್ ಡ್ರಾಪ್, ನಗರದ ಮಾಲ್‍ಗಳು, ದೇವಸ್ಥಾನದ ಕಾರ್ಯಕ್ರಮಗಳು, ಬಸ್ ನಿಲ್ದಾಣ, ಸ್ಕೈವಾಕ್‍ಗಳು, ಯಾವುದೇ ಸಭೆ, ಖಾಸಗಿ ಹೋಟೆಲ್‍ಗಳು ಸೇರಿದಂತೆ ಇನ್ನಿತರ ಯಾವುದೇ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಹಾಗೂ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಗರದ ಸೌಂದರ್ಯ ಹಾಳು ಮಾಡುತ್ತಿರುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಗೆ ಕೊನೆಗೂ ಕಡಿವಾಣ ಹಾಕುವ ಉದ್ದೇಶದಿಂದ ಬಿಬಿಎಂಪಿ ನಗರದಲ್ಲಿ ಇಂದಿನಿಂದ ಒಂದು ವರ್ಷ ಕಾಲ ಫ್ಲೆಕ್ಸ್, ಬ್ಯಾನರ್ ಮತ್ತು ಭಿತ್ತಿಪತ್ರ ಹಾಕುವುದನ್ನು ಸಂಪೂರ್ಣ ನಿಷೇಧಿಸಿದೆ. ನಿನ್ನೆ ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.
ಒಂದು ವೇಳೆ ನಿಷೇಧ ಉಲ್ಲಂಘಿಸಿದರೆ ಒಂದು ಲಕ್ಷ ರೂ. ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದರು. ಈಗಿರುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲು 15 ದಿನ ಕಾಲಾವಕಾಶ ನೀಡಲಾಗಿದ್ದು, 15 ದಿನದಲ್ಲಿ ತೆರವುಗೊಳಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆರಂಭಗೊಂಡಿದೆ.
ಕೆಂಪೇಗೌಡ ಜಯಂತಿಗೂ ತಟ್ಟಿದ ನಿಷೇಧ ಬಿಸಿ:
ನಾಡಪ್ರಭು ಕೆಂಪೇಗೌಡ ಜಯಂತಿಗೂ ಬಿಬಿಎಂಪಿಯ ಫ್ಲೆಕ್ಸ್, ಬ್ಯಾನರ್ ನಿಷೇಧದ ಬಿಸಿ ತಟ್ಟಿದೆ. ನಾಳೆ ಕೆಂಪೇಗೌಡ ಜಯಂತಿ ನಡೆಯಲಿದ್ದು, ಪ್ರತಿ ವರ್ಷ ಹಡ್ಸನ್ ವೃತ್ತ, ಬಿಬಿಎಂಪಿ ಕೇಂದ್ರ ಕಚೇರಿಯ ಸುತ್ತಮುತ್ತ ಫ್ಲೆಕ್ಸ್‍ಗಳು, ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಆದರೆ ಈ ವರ್ಷ ಫ್ಲೆಕ್ಸ್ ನಿಷೇಧದಿಂದಾಗಿ ಒಂದೇ ಒಂದು ಬ್ಯಾನರ್‍ಗಳು ಕಂಡುಬಂದಿಲ್ಲ.
ಸಾರ್ವಜನಿಕರಿಂದ ಆಕ್ಷೇಪ: ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೆ ಫ್ಲೆಕ್ಸ್, ಬ್ಯಾನರ್ ಅಳವಡಿಸುವುದರ ಮೇಲೆ ನಿಷೇಧ ಹೇರಿದ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ