ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಡಿ.ಎಂ.ನಂಜುಂಡಪ್ಪ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

 

ಬೆಂಗಳೂರು,ಆ.2-ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಡಿ.ಎಂ.ನಂಜುಂಡಪ್ಪ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ನಗರದ ಆನಂದರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ನಾಡಿನ ಹಿರಿಯ ಆರ್ಥಿಕ ತಜ್ಞರಾದ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಸಮಗ್ರವಾಗಿ ಜಾರಿಗೊಳಿಸಬೇಕು. ಕರ್ನಾಟಕದ ಕೆಲವು ಭಾಗಗಳು ಅಭಿವೃದ್ದಿಯಾಗಿದ್ದರೂ ಮತ್ತೆ ಕೆಲವು ಪ್ರದೇಶಗಳು ಅಭಿವೃದ್ದಿಯಲ್ಲಿ ಹಿಂದುಳಿದಿವೆ.
ನಂಜುಂಡಪ್ಪ ವರದಿಯಲ್ಲಿ ತಿಳಿಸಿರುವಂತೆ ರಾಜ್ಯದ 119 ತಾಲ್ಲೂಕುಗಳು ಶಿಕ್ಷಣ, ಉದ್ಯೋಗ,ಆರೋಗ್ಯ ಸೇವೆ, ಮೂಲಭೂತ ಸೌಕರ್ಯ, ಕೃಷಿ, ನೀರಾವರಿ ಇನ್ನಿತರ ಸೌಲಭ್ಯಗಳಿಂದ ವಂಚಿತವಾಗಿವೆ. ಇದನ್ನು ಸರಿಪಡಿಸಲು ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ಈ ತಾಲ್ಲೂಕುಗಳ ಅಭಿವೃದ್ದಿಗೆ ಅಗತ್ಯವಿರುವ ಅನುದಾನ ನೀಡುವುದು ಹಾಗೂ ಸಿಕ್ಕ ಅನುದಾನವನ್ನು ಬಳಕೆ ಮಾಡಿಕೊಳ್ಳುವುದು ಸೇರಿದಂತೆ ಈ ಎಲ್ಲ ವ್ಯವಸ್ಥೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಹಿಸಿಕೊಳ್ಳಬೇಕು. ನಾಡಿನಲ್ಲಿ ಪ್ರತ್ಯೇಕತೆಯ ದನಿ ಮೊಳಗದಂತೆ ಎಚ್ಚರಿಕೆ ವಹಿಸಿ ಐಕ್ಯತೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ