ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಆರೋಗ್ಯ ಕಾರ್ಡ್ ಕಡ್ಡಾಯವಿಲ್ಲ

 

ಬೆಂಗಳೂರು, ಆ.2- ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಕಡ್ಡಾಯ ಎಂಬ ನಿಯಮವಿಲ್ಲ. ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಇದ್ದರೂ ಸಾಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಆರೋಗ್ಯ ಕಾರ್ಡ್ ತರಲಿ, ಬಿಡಲಿ ಚಿಕಿತ್ಸೆ ಸಿಗುತ್ತಿದೆ. ಯಾರಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಮಾಹಿತಿ ನೀಡಿದರೆ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ರಾಜ್ಯದಲ್ಲಿ 879 ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗಾಗಲೇ 500 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ. 300 ಆಸ್ಪತ್ರೆಗಳು ಒಪ್ಪಂದಕ್ಕೆ ಸಹಿ ಹಾಕಬೇಕಿದೆ ಎಂದು ಹೇಳಿದರು.
ಆರೋಗ್ಯ ಕರ್ನಾಟಕ ಯೋಜನೆ ದೇಶದಲ್ಲೇ ಹೊಸ ಪ್ರಯೋಗವಾಗಿದ್ದು, ಬಿಪಿಎಲ್‍ನವರಿಗಿದ್ದ ವಾಜಪೇಯಿ ಆರೋಗ್ಯ ಯೋಜನೆ, ಎಪಿಎಲ್ ಕಾರ್ಡ್‍ದಾರರಿಗಿದ್ದ ರಾಜೀವ್ ಆರೋಗ್ಯ ಯೋಜನೆ, ಸಹಕಾರ ಸಂಘಗಳ ಸದಸ್ಯರಿಗಿದ್ದ ಯಶಸ್ವಿನಿ ಕಾರ್ಡ್ ಯೋಜನೆ, ಅಸಂಘಟಿತ ಕಾರ್ಮಿಕರಿಗಿದ್ದ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ, ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಜಾರಿಯಾಗಿದ್ದ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಒಗ್ಗೂಡಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ರೂಪಿಸಲಾಗಿದೆ.
ಇದರಲ್ಲಿ ಅರ್ಹತಾ ರೋಗಿ, ಸಾಮಾನ್ಯ ರೋಗಿ ಎಂಬ ಎರಡು ವಿಭಾಗಗಳನ್ನು ಮಾಡಿ ಬಿಪಿಎಲ್ ಕಾರ್ಡ್‍ದಾರರಿಗೆ ಅರ್ಹತಾ ರೋಗಿ ವಿಭಾಗದಡಿ ಸಂಪೂರ್ಣ ಉಚಿತವಾಗಿ ಪ್ರತಿ ಕುಟುಂಬದ ಐದು ಸದಸ್ಯರಿಗೆ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗೆ ತಲಾ 30 ಸಾವಿರವನ್ನು ವಾರ್ಷಿಕವಾಗಿ ಒದಗಿಸುವ ಹಾಗೂ ತೃತೀಯ ಹಂತದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಚಿಕಿತ್ಸೆಗೆ 1.5 ಲಕ್ಷ ಒದಗಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ.
ಇದರಡಿ 50 ಸಾವಿರ ಹೆಚ್ಚುವರಿಯಾಗಿ ನೀಡಲು ಸರ್ಕಾರ ಸಿದ್ಧವಿದೆ. ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಶೇ.30ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿರುವ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ.
ಈಗಾಗಲೇ 11 ಪ್ರಮುಖ ಆಸ್ಪತ್ರೆಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿದ್ದು, ಎರಡನೆ ಹಂತದಲ್ಲಿ 33 ಪ್ರಮುಖ ಆಸ್ಪತ್ರೆಗಳಲ್ಲಿ ಕಾರ್ಡ್ ವಿತರಿಸಲು ಸೆಪ್ಟೆಂಬರ್ 15ರಿಂದ ನೋಂದಣಿ ಆರಂಭಿಸಲಾಗುತ್ತಿದೆ. ಅಕ್ಟೋಬರ್‍ನಲ್ಲಿ ತಾಲೂಕು ಕೇಂದ್ರಗಳಲ್ಲೂ ನೋಂದಣಿ ಮಾಡಿಕೊಂಡು ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗುವುದು. ಸದ್ಯಕ್ಕೆ ಮುಂದಿನ ವರ್ಷ 2019 ಪೂರ್ಣಗೊಳ್ಳುವುದರೊಳಗೆ ಕಾರ್ಡ್ ನೋಂದಣಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಸ್ವಾಸ್ಥ್ಯ ಭಿಮಾ ಯೋಜನೆಯಡಿ 62 ಲಕ್ಷ ಕುಟುಂಬಗಳು ಬರುತ್ತವೆ. 2.4 ಕೋಟಿ ಜನರಿಗೆ ಇದರಡಿ ಚಿಕಿತ್ಸೆ ಒದಗಿಸಲಾಗಿದೆ. ಆ.31ರವರೆಗೂ ಈ ಯೋಜನೆ ಜಾರಿಯಲ್ಲಿದೆ. ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸೇರ್ಪಡೆಗೊಳಿಸಿ ಒಂದೇ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಿವರಿಸಿದರು.
ಆರೋಗ್ಯ ಕಾರ್ಡ್ ಇಲ್ಲದ ಸುಮಾರು 18,643 ಮಂದಿಗೆ ಚಿಕಿತ್ಸೆ ನೀಡಲಾಗಿದೆ. 501 ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಸುಮಾರು 1964 ಮಂದಿಗೆ ತುರ್ತು ಚಿಕಿತ್ಸೆ ಒದಗಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 1.5 ಲಕ್ಷವಿರುವ ಚಿಕಿತ್ಸಾ ವೆಚ್ಚವನ್ನು 5 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ವೈದ್ಯರ ಕೊರತೆ ಇಲ್ಲ: ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ. ಹೊಸದಾಗಿ 1065 ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, 386 ಮಂದಿ ಸರ್ಕಾರಿ ಸೇವೆಯಲ್ಲಿದ್ದಾರೆ. 102 ಮಂದಿ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ