ಮುಂಗೇರ್: ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಬರೋಬ್ಬರಿ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಸನಾಳನ್ನು ರಕ್ಷಣೆ ಮಾಡಲಾಗಿದೆ.
ಸತತ 24 ಗಂಟೆಗಳ ಕಾರ್ಯಾಚರಣೆಯ ಬಳಿಕ ಬಾಲಕಿಯನ್ನ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಎನ್ ಡಿಆರ್ ಎಫ್ ತಂಡ ಯಶಸ್ವಿಯಾಗಿದೆ.
ಬಾಲಕಿ ಸನಾ ನಿನ್ನೆ ಮಧ್ಯಾಹ್ನ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿದಳು. 40 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಬಾಲಕಿಯನ್ನು ಇಂದು ಸಂಜೆ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕಾರ್ಯಾಚರಣೆ ವೇಳೆ, ಮಗು ಬೋರ್ವೆಲ್ನೊಳಗಿನಿಂದ ಮಾತನಾಡುತ್ತಿದ್ದಳು, ಈ ವೇಳೆ ಮೇಲಿನಿಂದ ತಾಯಿಯೂ ಮಗುವಿಗೆ ಧೈರ್ಯ ತುಂಬುತ್ತಿದ್ದರು. ಪೊಲೀಸ್ ಇಲಾಖೆ ಹಾಗೂ ಎನ್ಡಿಆರ್ಎಫ್ ಸೇರಿದಂತೆ ಅನೇಕ ತಂಡಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದವು.
ಬಾಲಕಿ ಅಜ್ಜಿ ಮನೆಗೆ ತೆರಳಿ ಆಟವಾಡುತ್ತಿದ್ದ ವೇಳೆ ಮನೆ ಬಾಗಿಲ ಮುಂದೆಯೇ ಇದ್ದ ಕೊಳವೆ ಬಾವಿಗೆ ಬಿದ್ದಿದ್ದಳು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಜಿಲ್ಲಾಡಳಿತ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿತ್ತು.