ಚಿಕ್ಕಮಗಳೂರು, ಫೆ.28- ಮರಳು ಮಾಫಿಯಾಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಪಿಡಬ್ಯುಡಿಯ ಐವರು ಅಧಿಕಾರಿಗಳನ್ನು ಚಿಕ್ಕಮಗಳೂರು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಕಲಿ ಬಿಲ್ ಬಳಸಿ ಸುಮಾರು 10 ಕೋಟಿಗೂ ಹೆಚ್ಚು ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು , 4,000 ಕ್ಕೂ ಹೆಚ್ಚು ನಕಲಿ ಪರ್ಮಿಟ್ಗಳನ್ನು ಬಳಸಿ ಮರಳನ್ನು ಸಾಗಿಸಲಾಗಿತ್ತು. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು.
ಪಿಡಬ್ಲ್ಯುಡಿಯ ಕಾರ್ಯ ನಿರ್ವಹಣಾಧಿಕಾರಿ ಲೋಕೇಶಪ್ಪ , ಸಹಾಯಕ ಎಂಜಿನಿಯರ್ ಲೋಕೇಶ್, ಎಇ ಚಿರಂಜೀವಿ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು , ಇನ್ನು ಹಲವರಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಮೂಲದ ಮರಳು ಮಾಫಿಯಾ ದಂಧೆಕೋರರು ಎಗ್ಗಿಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿತ್ತು. ಇಲ್ಲಿನ ಬಂಧಿತ ಅಧಿಕಾರಿಗಳು ಲಂಚ ಪಡೆದು ಸಹಿ ಹಾಗೂ ಮೊಹರು ಹಾಕಿ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.