ಹೊಸದಿಲ್ಲಿ: ಗೋಹತ್ಯೆ ನಿಂತರೆ ಸಮೂಹ ಸನ್ನಿ ಹತ್ಯೆಗಳೂ ನಿಲ್ಲುತ್ತವೆ ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಉದ್ರಿಕ್ತ ಗುಂಪು ನಡೆಸುವ ಹತ್ಯೆಗಳು ಖಂಡನೀಯ. ಗೋಹತ್ಯೆಯನ್ನು ಹಲವು ಧರ್ಮಗಳು ಬೆಂಬಲಿಸುವುದಿಲ್ಲ. ಅದು ಪಾಪಕೃತ್ಯ ಎಂದು ಆ ಧರ್ಮಗಳು ಪರಿಗಣಿಸಿವೆ ಎಂದು ಇಂದ್ರೇಶ್ ಕುಮಾರ್ ಪ್ರತಿಪಾದಿಸಿದರು.
‘ಏಸುಕ್ರಿಸ್ತ ಜನಿಸಿದ್ದು ಗೋಶಾಲೆಯಲ್ಲಿ. ಹೀಗಾಗಿ ಕ್ರೈಸ್ತ ಧರ್ಮ ಗೋವನ್ನು ತಾಯಿ ಎಂದು ಪರಿಗಣಿಸುತ್ತದೆ. ಮೆಕ್ಕಾ-ಮದೀನಾಗೆ ಹೋದರೆ ಅಲ್ಲೂ ಗೋಹತ್ಯೆಯನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಗೋಹತ್ಯೆಯಂತಹ ಮಹಾಪಾಪದ ಕೃತ್ಯಗಳನ್ನು ತಡೆದರೆ ಸಮೂಹ ಸನ್ನಿ ಹತ್ಯೆಗಳೂ ತಾನಾಗಿಯೇ ನಿಲ್ಲುತ್ತವೆ’ ಎಂದು ಕುಮಾರ್ ನುಡಿದರು.
ಆಲ್ವಾರ್ನ ಸಮೂಹ ಸನ್ನಿ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಳೆದ ವಾರ ಹರ್ಯಾಣದ ಮೇವಾತ್ ಜಿಲ್ಲೆಯ 31 ವರ್ಷದ ಮುಸ್ಲಿಂ ವ್ಯಕ್ತಿಯನ್ನು ರಾಜಸ್ಥಾನದ ಆಲ್ವಾರ್ನಲ್ಲಿ ಗುಂಪೊಂದು ಹೊಡೆದು ಸಾಯಿಸಿತ್ತು. 8-10 ಮಂದಿಯ ಗುಂಪು ರಕ್ಬಾರ್ ಖಾನ್ ಎಂಬಾತನ ಮೇಲೆ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಆತ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.