ಬೆಂಗಳೂರು: ಲೋಕಸಭಾ ಚುನಾವಣೆ ನಿಗದಿತ ಅವಧಿಗಿಂತಲೂ ಮುಂಚಿತವಾಗಿ ನಡೆಯುವ ಸಾಧ್ಯತೆ ಇದ್ದು, ಹೊಸ ತಂಡದೊಂದಿಗೆ ಪಕ್ಷವನ್ನು ಬಲಪಡಿಸಲು ಜೆಡಿಎಸ್ ಸಿದ್ಧತೆ ಆರಂಭಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಈಗಾಗಲೇ ಎರಡು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅವರ ಜವಾಬ್ದಾರಿ ಹೆಚ್ಚಿದೆ. ಈ ಸಂಬಂಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಹೊಂದಲು ಕುಮಾರಸ್ವಾಮಿ ಅವರೇ ಬಯಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಹೊಂದಲು ತಾನೇ ಬಯಸಿದ್ದು, ಈ ವಾರದೊಳಗೆ ಎಚ್.ಡಿ. ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನೇಲಿನ ನಂಬಿಕೆಯನ್ನು ಬೆಳಸಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಂದ ತೆರವಾಗುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಐವರ ಹೆಸರು ಕೇಳಿಬರುತ್ತಿದೆ. ಈ ಪೈಕಿ ಮಧು ಬಂಗಾರಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದಾಗ್ಯೂ, ಅವರನ್ನು ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡುವ ಮೂಲಕ ಮಂತ್ರಿಗಿರಿ ನೀಡುವಂತೆ ಒತ್ತಡ ಕೇಳಿಬರುತ್ತಿದೆ.
ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, ಮಾಜಿ ಸಚಿವರಾದ ಹೆಚ್. ವಿಶ್ವನಾಥ್, ಬಿ. ನಿಂಗಯ್ಯ, ಮತ್ತು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಹೆಸರು ಕೂಡಾ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಆದಾಗ್ಯೂ, ಮಧು ಬಂಗಾರಪ್ಪ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಕಡೆಯೇ ಹೆಚ್ಚಿನ ಒಲವು ಇದೆ ಎನ್ನಲಾಗುತ್ತಿದೆ.
ಸಂಚಿವ ಸಂಪುಟ ಪುನರ್ ರಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಳಿಕ ಪಕ್ಷಕ್ಕಾಗಿ ಹೊಸ ಸದಸ್ಯರನ್ನು ನೋಂದಾಯಿಸಿಕೊಳ್ಳಲು ನಿರ್ಧರಿಸಲಾಗಿದೆ. ಪಕ್ಷಕ್ಕಾಗಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.